ಬೆಂಗಳೂರು: ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿ ನೀಡಿದ್ದ ಸಹಾಯವಾಣಿ ಸಂಖ್ಯೆಗೆ ಸುಮಾರು 30 ಕರೆಗಳು ಬಂದಿದ್ದವು. ಆದರೆ, ಅರ‍್ಯಾರು ಈವರೆಗೆ ನೇರವಾಗಿ ಯಾರೂ ದೂರು ದಾಖಲು ಮಾಡಿಲ್ಲ. ಸಂತ್ರಸ್ತರು ದೂರು ದಾಖಲು ಮಾಡುತ್ತಿರುವುದಕ್ಕೆ ಅಂಜಿಕೆ ಕಾರಣವಾ ಅಥವಾ ಭಯವಾ?
ಹೀಗೊಂದು ಚರ್ಚೆ ಇದೀಗ ಚಾಲ್ತಿಗೆ ಬಂದಿದೆ. ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ, ಎಸ್‌ಐಟಿ ಸಂತ್ರಸ್ತೆಯರ ಸಹಾಯಕ್ಕಾಗಿ, ಅವರ ದೂರುಗಳನ್ನು ಆಲಿಸುವ ಸಲುವಾಗಿ ಸಹಾಯವಾಣಿ ಆರಂಭಿಸಿತ್ತು. ಕರೆ ಮಾಡಿದವರ ಮಾಹಿತಿಯನು ಗೌಪ್ಯವಾಗಿಡುವ ಭರವಸೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 30 ಕರೆಗಳು ಬಂದಿದ್ದವು.
ಕರೆ ಮಾಡಿದ ಸಂತ್ರಸ್ತೆಯರು, ತಮ್ಮನ್ನು ಕೆಲಸ ಕೊಡಿಸುವುದಾಗಿ, ಕಾಂಟ್ರಾಕ್ಟ್ ಕೆಲಸ ಮಾಡಿಕೊಡುವುದಾಗಿ ಲೈಂಗಿಕವಾಗಿ ದೌರ್ಜನ್ಯ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ಕೆಲ ಮಹಿಳಾ ಅಧಿಕಾರಿಗಳಿಗೆ ವರ್ಗಾವಣೆಯ ಆಮಿಷವೊಡ್ಡಿ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಈ ಮಹಿಳೆಯರಿಗೆಲ್ಲ ಖುದ್ದು ದೂರು ನೀಡಿದರೆ, ಸೂಕ್ತ ತನಿಖೆ ನಡೆಸುವ ಭರವಸೆಯನ್ನು ಎಸ್‌ಐಟಿ ನೀಡಿತ್ತು.
ಆದರೆ, ಆ ಮೂವತ್ತು ಮಹಿಳೆಯರ ಪೈಕಿ ಯಾವೊಬ್ಬ ಸಂತ್ರಸ್ತೆಯೂ ಕೂಡ ಈವರೆಗೆ ಅಧಿಕೃತವಾಗಿ ದಊರು ದಾಖಲು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಮತ್ತೊಮ್ಮೆ ಸಂತ್ರಸ್ತೆಯರಿಗೆ ಮನವಿ ಮಾಡಿಕೊಂಡಿದೆ. ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿಯನ್ನು ಸೋರಿಕೆ ಮಾಡುವುದಿಲ್ಲ. ಹೀಗಾಗಿ, ನೀವು ಮತ್ತೊಮ್ಮೆ ಎಸ್‌ಯಟಿ ಸಹಾಯವಾಣಿ 6360938947 ಸಂಪರ್ಕಿಸಿ, ಖುದ್ದಾಗಿ ದೂರು ನೀಡಿ, ನಾವು ತನಿಖೆ ನಡೆಸಿ, ನಿಮಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಎಸ್‌ಐಟಿ ಪೊಲೀಸರ ಭರವಸೆ ನಡುವೆಯೂ ಸಂತ್ರಸ್ತೆಯರು ದೂರು ನೀಡಲು ಮುಂದಾಗದಿರುವುದಕ್ಕೆ, ಭಯ ಕಾರಣವೋ ಅಥವಾ ತಮ್ಮ ಮಾಹಿತಿ ಸೋರಿಕೆಯಾಗಿ ಸಮಾಜದಲ್ಲಿ ನಮಗೆ ಮುಜುಗರವಾಗುತ್ತದೆ ಎಂಬ ಆತಂಕವೋ ಎಂಬುದು ಇದೀಗ ಕುತೂಹಲದ ಸಂಗತಿಯಾಗಿದೆ. ರೇವಣ್ಣ ಅವರಿಗೆ ಇದೀಗ ಜಾಮೀನು ಸಿಕ್ಕಿರುವುದು, ಸಂತ್ರಸ್ತೆಯರ ಭಯವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗುತ್ತಿದೆ. ನಮಗೆ ನ್ಯಾಯ ಸಿಗುತ್ತೆಯೋ ಇಲ್ಲವೋ ಎಂಬ ಆತಂಕ ಅವರನ್ನು ಕಾಡುತ್ತಿದೆ.