ರಾಜಕೀಯ ಸುದ್ದಿ

ಬ್ರಾಹ್ಮಣ ಮಂಡಳಿಗೆ 100 ಕೋಟಿ ಅನುದಾನಕ್ಕೆ ದಿನೇಶ್ ಗುಂಡೂರಾವ್ ಆಗ್ರಹ

Share It

ಬೆಂಗಳೂರು: ಬ್ರಾಹ್ಮಣ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ನೂರು ಕೋಟಿ ಬೀಜ ಧನವನ್ನು
(ಸೀಡ್ ಮನಿ) ನೀಡಬೇಕೆಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಲ್ಲಿ ಇಂದು ಏರ್ಪಡಿಸಿದ್ದ 26- 27ನೇ ಸಾಲಿನ “ಸಾಂದೀಪನಿ ಶಿಷ್ಯವೇತನ ಯೋಜನೆಗೆ” ಚಾಲನೆ ನೀಡಿ ಅವರು ಮಾತನಾಡಿದರು.
ಬಡ ಬ್ರಾಹ್ಮಣರ ಅಭಿವೃದ್ಧಿಗೆ ಮಂಡಳಿಯ ಹಲವಾರು ಯೋಜನೆಗಳು ಪ್ರಯೋಜನಕಾರಿಯಾಗಿವೆ ಈ ಯೋಜನೆಯ ಹೆಚ್ಚು ಜನ ಲಾಭ ಪಡೆಯುತ್ತಿರುವುದು ಉತ್ತಮ ಬೆಳವಣಿಗೆ. ಮೇಲಾಗಿ ಮಂಡಳಿಯ ಸಾಲ ವಸೂಲಾತಿ ಪ್ರಮಾಣ ಶೇಕಡ 98 ಕ್ಕಿಂತ ಹೆಚ್ಚಾಗಿರುವುದರ ಬಗ್ಗೆ ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಥಿಕವಾಗಿ ಹಿಂದುಳಿದ ಸಮುದಾಯದ ಬ್ರಾಹ್ಮಣ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಉದ್ದೇಶದಿಂದ ಸಾಂದೀಪನಿ ಶಿಷ್ಯವೇತನ ಜಾರಿಗೊಳಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ಹಾಗೂ ಸಾಮಾನ್ಯ ಪದವಿ ಕೋರ್ಸ್ ವಿದ್ಯಾರ್ಥಿಗಳಿಗೆ ವಾರ್ಷಿಕ 15,000 ನಿರ್ವಹಣಾ ವೆಚ್ಚ ಹಾಗೂ ಸಿಇಟಿ,ನೀಟ್ ಮತ್ತಿತರೆ ವೃತ್ತಿಪರ ಕೋರ್ಸ್ ಗಳ ಪ್ರವೇಶ ಶುಲ್ಕದ ಎರಡನೇ ಮೂರು ಭಾಗದಷ್ಟು ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ಹೇಳಿದರು.
ಸಾಂದೀಪನಿ ಯೋಜನೆಯ ವಿವರಗಳನ್ನು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ.ಕೆ ವಿವರಿಸಿದರು. ಈ ಸಂದರ್ಭದಲ್ಲಿ ಮಂಡಳಿಯ ಅಧಿಕಾರೇತರ ನಿರ್ದೇಶಕರಾದ ಪಿ ಎಂ ಮಾಲತೇಶ್, ಸಿ ಎನ್ ನಾಗೇಶ್, ಕಶ್ಯಪ್ ನಂದನ್ ಅಧಿಕಾರಿ ನಿರ್ದೇಶಕರಾದ ಶೋಭ ಹೆಚ್ ಎ ಹಾಗೂ ಕಲಾವತಿ ಎಸ್ ಎನ್ ಹಾಜರಿದ್ದರು.
ಶಿಷ್ಯವೇತನ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳು ರಾಜ್ಯದ ಖಾಯಂ ನಿವಾಸಿ ಆಗಿರಬೇಕು. ಆರ್ಥಿಕವಾಗಿ ಹಿಂದುಳಿದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ ಹೆಚ್ಚಿನ ಮಾಹಿತಿಗೆ ಮಂಡಳಿಯ ಜಾಲತಾಣವನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅರ್ಜಿದಾರರು ಮಂಡಳಿಯ ಜಾಲತಾಣ: Ksbdb.Karnataka.gov.in ಹಾಗೂ ಸಹಾಯವಾಣಿ: 080-29605888 or 8762249230 ಸಂಪರ್ಕಿಸಬಹುದು.


Share It

You cannot copy content of this page