ಬೆಳಗಾವಿ : ಮಾಲೀಕನ ಮರಣದ ಬಳಿಕವೂ ತಾನೇ ಆಸ್ತಿಯ ಮಾಲೀಕನೆಂದು ಹೇಳಿಕೊಂಡು ಜಮೀನನ್ನು ಮಾರಾಟ ಮಾಡಲು ಯತ್ನಿಸಿ ವಂಚನೆ ನಡೆಸಿದ ಆರೋಪದ ಮೇಲೆ 75 ವರ್ಷದ ವ್ಯಕ್ತಿಯನ್ನು ಮಾರ್ಕೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತೋಪಿನಕಟ್ಟಿಯ ಶ್ರೀಶೈಲ್ ದತ್ತಾತ್ರೇಯ ಗುರುವ (29) ಅವರು ನೀಡಿದ ದೂರಿನ ಆಧಾರದ ಮೇಲೆ ಮಾರ್ಕೇಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 34/2025ರಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು.
ತನಿಖೆ ವೇಳೆ ಪ್ರಕರಣದ ಆರೋಪಿ ರಾಮಚಂದ್ರ ವೆಂಕಟೇಶ ದೇಶಪಾಂಡೆ (75), ಪಾಟೀಲ ಗಲ್ಲಿ, ಕೋಟಬಾಗಿ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ದೂರುದಾರರ ಅಜ್ಜ ಮಶನು ಜಾಯಪ್ಪ ಗುರವ ಹಾಗೂ ಅವರ ಸಹೋದರರು 1998ರಲ್ಲಿ ಚಿದಂಬರ ಶ್ರೀಪಾದ ಕುಲಕರ್ಣಿ ಮತ್ತು ರಮೇಶ ದಿಗಂಬರ ಕುಲಕರ್ಣಿ ಅವರಿಂದ ಬಡಾಲ ಅಂಕಲಗಿ ಗ್ರಾಮದ ವ್ಯಾಪ್ತಿಯ ಸರ್ವೇ ನಂಬರ್ 340ರ 7 ಎಕರೆ 32 ಗುಂಟೆ ಜಮೀನನ್ನು ಖರೀದಿಸಿದ್ದರು. ಬಳಿಕ ಜಮೀನು ಅವರ ಸ್ವಾಧೀನದಲ್ಲಿತ್ತು ಎನ್ನಲಾಗಿದೆ.
ಆದರೆ, ಜಮೀನಿನ ಮೂಲ ಮಾಲೀಕರು ಮೃತಪಟ್ಟಿದ್ದರೂ ಆರೋಪಿ ರಾಮಚಂದ್ರ ದೇಶಪಾಂಡೆ ಅವರು ಮೃತ ಚಿದಂಬರ ಶ್ರೀಪಾದ ಕುಲಕರ್ಣಿ ಅವರ ಹೆಸರಿನಲ್ಲಿ ತಾನೇ ಆಸ್ತಿಯ ಮಾಲೀಕನೆಂದು ಹೇಳಿಕೊಂಡು, ಬೆಳಗಾವಿ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿ ವೆಬ್ ಕ್ಯಾಮೆರಾದಲ್ಲಿ ಫೋಟೋ ತೆಗೆಸಿಕೊಂಡು ಹಾಗೂ ಹೆಬ್ಬೆರಳಿನ ಗುರುತು ನೀಡಿ, ಪ್ರಕರಣದಲ್ಲಿನ ಇತರ ಆರೋಪಿಗಳಿಗೆ ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡು ದೂರುದಾರರಿಗೆ ವಂಚನೆ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಮಚಂದ್ರ ವೆಂಕಟೇಶ ದೇಶಪಾಂಡೆಯನ್ನು ಆಗಸ್ಟ್ 11, 2026ರಂದು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕೃತ್ಯಕ್ಕೆ ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿರುವ ವಿನೋದ ದೇಶಪಾಂಡೆ ಸೇರಿದಂತೆ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಮಾರ್ಕೇಟ್ ಪೊಲೀಸ್ ಠಾಣೆಯ ಪಿಐ ಜೆ.ಎಂ. ಕಾಮಿರ್ಚಿ, ಪಿಎಸ್ಐ ಹೆಚ್.ಎಲ್. ಕೆರೂರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಪೊಲೀಸರ ಕಾರ್ಯಾಚರಣೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.

