ಉಪಯುಕ್ತ ಸುದ್ದಿ

ಅನುಷ್ಠಾನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್‌ ಸಾಮರ್ಥ್ಯಕ್ಕಾಗಿ ಕರ್ನಾಟಕಕ್ಕೆ ಪ್ರಶಸ್ತಿ

Share It

ಅನುಷ್ಠಾನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್‌ ಸಾಮರ್ಥ್ಯಕ್ಕಾಗಿ ಕರ್ನಾಟಕಕ್ಕೆ ಪ್ರಶಸ್ತಿ

ಚೆನ್ನೈ, ಅಕ್ಟೋಬರ್ 9, 2026:’ಅನುಷ್ಠಾನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್‌ ಸಾಮರ್ಥ್ಯ’ಕ್ಕಾಗಿ ಕರ್ನಾಟಕವು 2026ನೇ ಸಾಲಿನ ಪ್ರಶಸ್ತಿಯನ್ನು ತನ್ನದಾಗಿಸಿಕೊಡಿದೆ.

ರಾಜ್ಯದಲ್ಲಿ 9 ಗಿಗಾ ವ್ಯಾಟ್‌ ಸಾಮರ್ಥ್ಯದ ಪವನ ವಿದ್ಯುತ್‌ ಯೋಜನೆಗಳು ಅನುಷ್ಠಾನದ ಹಂತದಲ್ಲಿದ್ದು, ವರ್ಷದಿಂದ ವರ್ಷಕ್ಕೆ ಪವನ ವಿದ್ಯುತ್‌ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡುತ್ತಿರುವ ಕರ್ನಾಟಕಕ್ಕೆ ಈ ಪ್ರಶಸ್ತಿ ಲಭಿಸಿದೆ.

ಇಂಡಿಯನ್ ವಿಂಡ್ ಟರ್ಬೈನ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಚೆನ್ನೈನ ಟ್ರೇಡ್ ಸೆಂಟರ್‌ನಲ್ಲಿ ಆಯೋಜಿಸಿರುವ ವಿಂಡರ್ಜಿ ಇಂಡಿಯಾ 2026ರ 8ನೇ ಆವೃತ್ತಿಯಲ್ಲಿ ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ, ಶಿಕ್ಷಣ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಪ್ರಲ್ಹಾದ್‌ ಜೋಶಿ ಅವರಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಜಿ.ಆರ್‌.ಜೆ. ಅವರು ಪ್ರಶಸ್ತಿ ಸ್ವೀಕರಿಸಿದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ದೂರದೃಷ್ಟಿಯ ಫಲವಾಗಿ ‘ಅನುಷ್ಠಾನ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್‌ ಸಾಮರ್ಥ್ಯ’ಕ್ಕಾಗಿ ರಾಜ್ಯವು ಈ ಬಾರಿಯೂ ಪ್ರಶಸ್ತಿ ಪಡೆಯುವಂತಾಗಿದೆ. ಈ ಸಾಧನೆಯು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಇರುವ ಬದ್ಧತೆ ಮತ್ತು ಇಂಧನ ಅಗತ್ಯಗಳನ್ನು ಪೂರೈಸಲು ಪವನ ವಿದ್ಯುತ್‌ ಬಳಸಿಕೊಳ್ಳುವಲ್ಲಿ ರಾಜ್ಯ ಕೈಗೊಂಡಿರುವ ಕ್ರಮಗಳಿಗೆ ಸಾಕ್ಷಿಯಾಗಿದೆ.

ಸಾಧನೆ ಮೆಚ್ಚಿದ ಸಚಿವ ಜಾರ್ಜ್‌
ಕರ್ನಾಟಕದ ಈ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌, “ಅನುಷ್ಠಾನ ಹಂತದಲ್ಲಿರುವ ಗರಿಷ್ಠ ಪವನ ವಿದ್ಯುತ್ ಸಾಮರ್ಥ್ಯ ಹೊಂದಿರುವ ರಾಜ್ಯವೆಂಬ ಮಾನ್ಯತೆ ಪಡೆದುಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.ಈ ಸಾಧನೆಯು ನವೀಕರಿಸಬಹುದಾದ ಇಂಧನದ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಇರುವ ನಮ್ಮ ಸರ್ಕಾರದ ಬದ್ಧತೆ ಹಾಗೂ ಈ ವಲಯದಲ್ಲಿನ ಹೂಡಿಕೆಗೆ ಪೂರಕ ಪರಿಸರ ವ್ಯವಸ್ಥೆಯನ್ನು ಕಲ್ಪಿಸಲು ನಾವು ಕೈಗೊಂಡಿರುವ ಪ್ರಯತ್ನಗಳ ಪ್ರತೀಕವಾಗಿದೆ. ಇದನ್ನು ಸಾಧ್ಯವಾಗಿಸಿರುವ ಕ್ರೆಡಲ್‌ ಹಾಗೂ ಎಲ್ಲ ಪಾಲುದಾರರನ್ನು ನಾನು ಅಭಿನಂದಿಸುತ್ತೇನೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ನಮ್ಮ ಇಂಥ ಪ್ರಯತ್ನಗಳು ನಿರಂತರವಾಗಿರುತ್ತವೆ,” ಎಂದರು.

ಕೋಟ್‌

“ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯವು ನಿರಂತರವಾಗಿ ಕೈಗೊಂಡಿರುವ ಪ್ರಯತ್ನಗಳ ಫಲವಾಗಿ ಈ ಪ್ರಶಸ್ತಿ ದೊರೆತಿದೆ. ನವೀಕರಿಸಬಹುದಾದ ಇಂಧನ ವಲಯದ ನೀತಿಗಳು, ಮೂಲಸೌಕರ್ಯ ಹಾಗೂ ಹೂಡಿಕೆದಾರರ ವಿಶ್ವಾಸಕ್ಕೆ ಸಾಕ್ಷಿಯಾಗಿ ಈ ಮಾನ್ಯತೆ ದೊರೆತಿದೆ. ನಿಗದಿತ ಸಮಯದೊಳಗೆ ಯೋಜನೆಗಳ ಅನುಷ್ಠಾನಕ್ಕೆ ನೆರವಾಗುವ ಜತೆಗೆ ನವೀಕರಿಸಬಹುದಾದ ಇಂಧನ ವಲಯವನ್ನು ಮತ್ತಷ್ಟು ಬಲಪಡಿಸಲು ಇಂಧನ ಇಲಾಖೆ ಬದ್ಧ.”
ಗೌರವ್ ಗುಪ್ತ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ

“ಅನುಷ್ಠಾನ ಹಂತದಲ್ಲಿರುವ 9 ಗಿಗಾವ್ಯಾಟ್ ಪವನ ವಿದ್ಯುತ್ ಸಾಮರ್ಥ್ಯಕ್ಕಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಸಂತಸದ ತಂದಿದೆ. ಇಂಧನ ಸಚಿವರ ಮಾರ್ಗದರ್ಶನ ಹಾಗೂ ಬೆಂಬಲದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಕರ್ನಾಟಕವು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಪವನ ವಿದ್ಯುತ್ ವಲಯದಲ್ಲಿನ ಹೂಡಿಕೆಗೆ ಆದ್ಯತೆಯ ತಾಣವಾಗಿ ರಾಜ್ಯದ ಸ್ಥಾನವನ್ನು ಬಲಪಡಿಸುವಲ್ಲಿ ಈ ಪ್ರಶಸ್ತಿಯು ದೊಡ್ಡ ಪಾತ್ರವಹಿಸಲಿದೆ. ಹೂಡಿಕೆದಾರರು ಹಾಗೂ ಯೋಜನೆಗಳಿಗೆ ಅಗತ್ಯ ಸಹಕಾರ ನೀಡುವ ಜತೆಗೆ ನವೀಕರಿಸಬಹುದಾದ ಇಂಧನ ವಲಯದ ಗುರಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕ್ರೆಡಲ್‌ ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ.”

ದಿವ್ಯಾ ಪ್ರಭು ಜಿ.ಆರ್‌.ಜೆ, ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್‌

ವಿಂಡರ್ಜಿ ಇಂಡಿಯಾ 2025

ಮೂರು ದಿನಗಳ ವಿಂಡರ್ಜಿ ಇಂಡಿಯಾ 2026 ಕಾರ್ಯಕ್ರಮವು ನೀತಿ ನಿರೂಪಕರು, ತಂತ್ರಜ್ಞಾನ ವಲಯದ ಜಾಗತಿಕ ನಾಯಕರು, ಹೂಡಿಕೆದಾರರು, ಉದ್ಯಮದ ಪಾಲುದಾರರ ಸಂವಾದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿತ್ತು. 3,000 ಕ್ಕೂ ಹೆಚ್ಚು ಜಾಗತಿಕ ಪ್ರತಿನಿಧಿಗಳು ಮತ್ತು ಗಣ್ಯರು ಹಾಜರಿದ್ದ ಈ ಕಾರ್ಯಕ್ರಮವು ಜಾಗತಿಕ ಮಟ್ಟದಲ್ಲಿ ಪವನ ವಿದ್ಯುತ್‌ ವಲಯದಲ್ಲಿನ ದೇಶದ ಸಾಧನೆಯನ್ನು ಎತ್ತಿ ಹಿಡಿಯಿತು.


Share It

You cannot copy content of this page