ಬೆಂಗಳೂರು: ರಾಜ್ಯಾದ್ಯಂತ 45 ಐಸ್ ಕ್ರೀಮ್ ಉತ್ಪಾದನಾ ಘಟಕದ ಮೇಲೆ ಆಹಾರ ಸುರಕ್ಷತಾ ಮತ್ತು ಔಷಧ ಮಂಡಳಿ ಪರಿಶೀಲನೆ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ, ನಾಲ್ಕು ಘಟಕಗಳಲ್ಲಿ ಅವಧಿ ಮುಗಿದ ಆಹಾರ ಉತ್ಪನ್ನಗಳು, ಲೇಬಲಿಂಗ್ನಲ್ಲಿನ ಲೋಪಗಳು ಮತ್ತು ಅಸ್ವಚ್ಛ ಪರಿಸ್ಥಿತಿಯಂತಹ ಉಲ್ಲಂಘನೆಗಳು ಕಂಡು ಬಂದಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ಅಕ್ಟೋಬರ್ 8 ರಂದು ಈ ಕಾರ್ಯಾಚರಣೆ ನಡೆಸಲಾಗಿದೆ. ಸಂಗ್ರಹಿಸಲಾದ ಮಾದರಿಗಳಲ್ಲಿ ಐಸ್ ಕ್ರೀಮ್, ಹಾಲು, ಹಾಲಿನ ಪುಡಿ, ಸುವಾಸನೆ ನೀಡುವ ಪದಾರ್ಥಗಳು, ಸಕ್ಕರೆ, ಆಹಾರ ಸೇರ್ಪಡೆಗಳು ಮತ್ತು ಇತರ ಕಚ್ಚಾ ವಸ್ತುಗಳು ಸೇರಿವೆ. ಇವುಗಳ ಗುಣಮಟ್ಟವನ್ನು ನಿರ್ಣಯಿಸಲು ಹಾಗೂ ನಿಗದಿತ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂದು ಪರಿಶೀಲಿಸಲು ಇವುಗಳನ್ನು ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ಬೆಂಗಳೂರಿನ ಜಯನಗರ 3ನೇ ಬ್ಲಾಕ್ನಲ್ಲಿರುವ ‘ಸವಾರಾ ಐಸ್ ಕ್ರೀಮ್ ಕೆಫೆ’ಯಲ್ಲಿ, ಅವಧಿ ಮುಗಿದಿದ್ದ ಮ್ಯಾರಿಗೋಲ್ಡ್ ಬ್ರಿಟಾನಿಯಾ ಬಿಸ್ಕತ್ತುಗಳು, ನಂದಿನಿ ಸಮೃದ್ಧಿ ಹಾಲು, ಆಲ್ಕಲೈಸ್ಡ್ ಚಹಾ ಮತ್ತು ಕಾಫಿ ಮಿಶ್ರಣಗಳು ಹಾಗೂ ಒಣಗಿದ ತೆಂಗಿನಕಾಯಿ ಪುಡಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಘಟಕದ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಬನ್ನೇರುಘಟ್ಟ ರಸ್ತೆಯ ಬಿಲೆಕಹಳ್ಳಿಯಲ್ಲಿರುವ ಎಂ.ಎನ್. ಎಂಟರ್ಪ್ರೈಸಸ್ನಲ್ಲಿ ಅವಧಿ ಮುಗಿದಿದ್ದ ಪ್ಲೇನ್ ಕ್ಯಾರಮೆಲ್, ನೆಸ್ಲೆ ಮಿಲ್ಕ್ಮೇಡ್ ಮತ್ತು ಮಿಲ್ಕಿ ಮಿಸ್ಟ್ ಖೋವಾವನ್ನು ವಶಪಡಿಸಿಕೊಂಡ ಅಧಿಕಾರಿಗಳು ಆಹಾರ ಉತ್ಪನ್ನಗಳ ಲೇಬಲಿಂಗ್ನಲ್ಲಿಯೂ ಈ ಘಟಕವು ಲೋಪಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಯಚೂರಿನಲ್ಲಿರುವ ಜೆಮಿನಿ ಐಸ್ ಕ್ರೀಮ್ ಉತ್ಪಾದನಾ ಘಟಕದಲ್ಲಿ ಅಸ್ವಚ್ಛ ಪರಿಸ್ಥಿತಿ ಕಂಡು ಬಂದ ಹಿನ್ನೆಲೆ ಘಟಕಕ್ಕೆ ಇಲಾಖೆಯು ನೋಟಿಸ್ ಜಾರಿ ಮಾಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಮೈಸೂರಿನ ಜಾನ್ ಕ್ಯಾಂಡಿ ಐಸ್ ಕ್ರೀಮ್ ಉತ್ಪಾದನಾ ಘಟಕದಲ್ಲಿ ಲೇಬಲಿಂಗ್ ನಿಯಮಗಳ ಪಾಲನೆಯಲ್ಲಿ ಲೋಪಗಳು ಕಂಡುಬಂದಿದ್ದು, ಅಧಿಕಾರಿಗಳು 20,000 ರೂ. ಮೌಲ್ಯದ ಐಸ್ ಕ್ರೀಮ್ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಆಹಾರ ಸುರಕ್ಷತಾ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸುವ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಮತ್ತಷ್ಟು ಪರಿಶೀಲನೆಗೆ ಯೋಜನೆ: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಇಂತಹ ವಿಶೇಷ ತಪಾಸಣಾ ಕಾರ್ಯಾಚರಣೆಗಳು ಮುಂದುವರಿಯಲಿವೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಯುಕ್ತರಾದ ಶ್ರೀನಿವಾಸ್ ಕೆ. ತಿಳಿಸಿದ್ದಾರೆ.
70 ಮಾದರಿಗಳ ಪ್ರಯೋಗಾಲಯದ ಫಲಿತಾಂಶಗಳು, ಪರೀಕ್ಷೆಗೆ ಒಳಪಡಿಸಿದ ಉತ್ಪನ್ನಗಳು ಮತ್ತು ಕಚ್ಚಾ ವಸ್ತುಗಳು ನಿಗದಿತ ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತವೆಯೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಆಹಾರ ಸುರಕ್ಷತೆಯನ್ನು ಖಚಿತಪಡಿಸುವ ಪ್ರಯತ್ನಗಳ ಭಾಗವಾಗಿ ತಪಾಸಣೆ ಮತ್ತು ಜಾರಿ ಕ್ರಮಗಳು ಮುಂದುವರಿಯಲಿವೆ ಎಂದು ಇಲಾಖೆ ತಿಳಿಸಿದೆ.
