ಕಾರವಾರ(ಉತ್ತರ ಕನ್ನಡ): ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ನ ಬಳಗಾರ್ ಬಳಿ ಲಾರಿ ಹಾಗೂ ತೂಫಾನ್ ಕಮರ್ಷಿಯಲ್ ವಾಹನದ ನಡುವೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ‘ಸ್ವಿಗ್ಗಿ’ (Swiggy) ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಧಾರವಾಡದಿಂದ ರಾತ್ರಿ ವೇಳೆ ಧರ್ಮಸ್ಥಳ ಹಾಗೂ ಮಂಗಳೂರು ಕಡೆಗೆ ಪ್ರವಾಸ ಹೊರಟಿದ್ದಾಗ ದುರಂತ ಸಂಭವಿಸಿದೆ. ತೂಫಾನ್ ವಾಹನದಲ್ಲಿ ಚಾಲಕ ಸೇರಿ ಒಟ್ಟು 9 ಜನರಿದ್ದರು.
ಅರಬೈಲ್ ಘಾಟ್ನ ಬಳಗಾರ್ ತಲುಪುತ್ತಿದ್ದಂತೆ ತೂಫಾನ್ ವಾಹನ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೂಫಾನ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ತೂಫಾನ್ ವಾಹನದಲ್ಲಿದ್ದ 6 ಜನ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಬಸವರಾಜ್ (48 ವರ್ಷ), ಅಭಿಷೇಕ್ ಈಶ್ವರ್ (28 ವರ್ಷ), ಅಕ್ಷಯ (26 ವರ್ಷ), ಅಭಿಷೇಕ್ (26 ವರ್ಷ), ಸಂಜೀವ/ಸಂಜಯ ಅಂಗಡಿ (33 ವರ್ಷ), ಮಂಜುನಾಥ ಚುಲಕಿ (32 ವರ್ಷ) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಶಿವರಾಜ್ ದುರ್ಗಪ್ಪ ಮಡಿವಾಳ್ (22 ವರ್ಷ), ಸಚಿನ್, ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28 ವರ್ಷ) ಸೇರಿ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

