ಅಪರಾಧ ಸುದ್ದಿ

ದೆಹಲಿಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ: ಮೂವರು ಸಾವು, 11 ಮಂದಿಗೆ ಗಾಯ

Share It

ನವದೆಹಲಿ: ದೆಹಲಿಯ ಹೊಸ ಸೀಮಾಪುರಿಯ ಈದ್ಗಾ ಮೀನು ಮಾರುಕಟ್ಟೆಯ ಬಳಿ ಐದು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿದ್ದು, ಮೂವರು ಮೃತ ಪಟ್ಟು 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಧ್ಯಾಹ್ನ 3:15ರ ಸುಮಾರಿಗೆ ಕಟ್ಟಡ ಕುಸಿತದ ಬಗ್ಗೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ಮಾಹಿತಿ ಪಡೆದ ತಕ್ಷಣ ದೆಹಲಿ ಅಗ್ನಿಶಾಮಕ ದಳದ ತಂಡವು ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪ್ರಸ್ತುತ ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಘಟನೆಯಲ್ಲಿ ಮಗು ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. 12 ವರ್ಷದ ಬಾಲಕಿ, ಗರ್ಭಿಣಿ ಮಹಿಳೆ ಮತ್ತು ಇನ್ನೊಬ್ಬ ಮಗು ಮೃತಪಟ್ಟಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ ಸುಮಾರು 11 ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವಶೇಷಗಳ ಅಡಿಯಲ್ಲಿ ಜನರು ಸಿಕ್ಕಿಹಾಕಿಕೊಂಡಿರುವ ವರದಿಗಳಿವೆ. ಗಾಯಗೊಂಡವರನ್ನು ತಕ್ಷಣವೇ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರದ ದೃಶ್ಯಾವಳಿಗಳಿರುವ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಅವಶೇಷಗಳು ಕಾಣಿಸುತ್ತಿವೆ. ನೂರಾರು ಸ್ಥಳೀಯರು ಅವಶೇಷಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರೊಂದಿಗೆ ದೆಹಲಿ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಅಗ್ನಿಶಾಮಕ ಇಲಾಖೆಯ ಪ್ರಕಾರ, ಆರಂಭದಲ್ಲಿ ಮೂರು ವಾಟರ್ ಟೆಂಡರ್‌ಗಳು (WT) ಮತ್ತು ಇನ್ಸಿಡೆಂಟ್ ರೆಸ್ಪಾನ್ಸ್ ಟೀಮ್ (IRT)ಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಮುಖ್ಯ ಅಗ್ನಿಶಾಮಕ ಅಧಿಕಾರಿ ಎ.ಕೆ. ಮಲಿಕ್ ಅವರು ಘಟನೆಯ ಕುರಿತು ವಿವರಗಳನ್ನು ನೀಡಿದ್ದಾರೆ. ಪ್ರಸ್ತುತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಎಸ್‌ಟಿಒ (STO) ಮನೋಜ್ ತ್ಯಾಗಿ ಅವರು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಈ ಕಟ್ಟಡವು ಒಳಭಾಗದ ರಸ್ತೆಯಲ್ಲಿದ್ದು, ಕಳೆದ ವರ್ಷವಷ್ಟೇ ನಿರ್ಮಿಸಲಾಗಿತ್ತು ಎಂದು ವರದಿಯಾಗಿದೆ. ಐದು ಅಂತಸ್ತಿನ ಈ ಕಟ್ಟಡದ ನೆಲ ಅಂತಸ್ತಿನಲ್ಲಿ ಅಂಗಡಿಗಳಿದ್ದವು ಮತ್ತು ಮೇಲಿನ ನಾಲ್ಕು ಅಂತಸ್ತುಗಳಲ್ಲಿ ವಿವಿಧ ಕುಟುಂಬಗಳು ವಾಸಿಸುತ್ತಿದ್ದವು. ಕಟ್ಟಡದ ಮಾಲೀಕರು ಮತ್ತು ಅವರ ಕುಟುಂಬವೂ ಅಲ್ಲಿಯೇ ವಾಸಿಸುತ್ತಿದ್ದರು. ಅವರೂ ಕೂಡ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯರು ಅವಶೇಷಗಳಡಿಯಿಂದ ಇಬ್ಬರು ಮಕ್ಕಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.


Share It

You cannot copy content of this page