ಹುಬ್ಬಳ್ಳಿ: ಹುಬ್ಬಳ್ಳಿ ನಗರವನ್ನು ಬೆಚ್ಚಿಬೀಳಿಸಿದ್ದ ಎರಡನೇ ಕೊಲೆ ಅಂಜಲಿ ಅಂಬಿಗೇರ ಹತ್ಯೆಯ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲು ಸಿಐಡಿ ಪೊಲೀಸರು ಹುಬ್ಬಳ್‌ಳಿಗೆ ಆಗಿಸಿದ್ದಾರೆ.
ಅಂಜಲಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಸಲುವಾಗಿ ಹುಬ್ಬಳ್ಳಿ ಅವರ ನಿವಾಸಕ್ಕೆ ಆಗಮಿಸಿದ್ದ ವೇಳೆ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡುವ ಭರವಸೆ ನೀಡಿದ್ದರು. ಅಂತೆಯೇ ಬೆಂಗಳೂರಿಗೆ ಬರುತ್ತಿದ್ದಂತೆ ಸಿಐಡಿ ತನಿಖೆಗೆ ಆದೇಶ ಮಾಡಿದ ಸರಕಾರ ಅದಕ್ಕಾಗಿ ಎಸ್‌ಪಿ ವೆಂಕಟೇಶ್ ನೇತೃತ್ವದ ತಂಡವನ್ನು ರಚನೆ ಮಾಡಿತ್ತು.
ಅಂಜಲಿಯನ್ನು ಬೆಳಗಿನ ಜಾವ ೫.೩೦ ರ ಸುಮಾರಿಗೆ ಆಕೆಯ ಮನೆಗೆ ನುಗ್ಗಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ ಆರೋಪಿ ವಿಶ್ವ ಆಲಿಯಾಸ್ ಗಿರೀಶ್, ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಪೊಲೀಸರು ಎರಡು ತಂಡಗಳಲ್ಲಿ ಆತನ ಪತ್ತೆಗೆ ಬಲೆ ಬೀಸಿದ್ದರು.
ಆರೋಪಿ ದಾವಣಗೆರೆಯ ರೈಲ್ವೇ ನಿಲ್ದಾಣದಲ್ಲಿ ಸಹಪ್ರಯಾಣಿಕರ ಜತೆ ಕಿರಿಕ್ ಮಾಡಿಕೊಂಡು, ಪ್ರಯಾಣಿಕರೊಬ್ಬರಿಗೆ ಚಾಕುವಿನಿಂದ ತಿವಿದು, ಪರಾರಿಯಾಗಲು ಯತ್ನಿಸಿ, ರೈಲಿನಿಂದ ಬಿದ್ದು ಗಂಭಿರವಾಗಿ ಗಾಯಗೊಂಡಿದ್ದ. ಆತನನ್ನು ವಶಕ್ಕೆ ಪಡೆದ ಹುಬ್ಬಳ್ಳಿ ಪೊಲೀಸರು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು.
ಆತನಿಗೆ ಚಿಕಿತ್ಸೆ ಕೊಡಿಸುತ್ತಿರುವ ಪೊಲೀಸರ ಕ್ರಮವನ್ನು ಖಂಡಿಸಿ, ಅಂಜಲಿ ಸಹೋದರಿ ಆತ್ಮಹತ್ಯೆ ಪ್ರಯತ್ನ ನಡೆಸಿದ್ದರು. ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಸರಕಾರಕ್ಕೆ ಒತ್ತಾಯಿಸಿದ್ದರು. ಈ ವೇಳೆ ಗೃಹಸಚಿವ ಡಾ. ಜಿ ಪರಮೇಶ್ವರ ಅವರು, ಮೃತಳ ಮನೆಗೆ ಭೇಟಿ ನೀಡಿ, ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು.
ಸಿಐಡಿ ತಂಡ ಹುಬ್ಬಳ್ಳಿಗೆ ಭೇಟಿ: ಸರಕಾರ ಅಂಜಲಿ ಹತ್ಯೆ ಪ್ರಕರಣವನ್ನು ಸಿಐಡಿಗೆ ನೀಡುತ್ತಿದ್ದಂತೆ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಅಗತ್ಯವಿರುವ ಪ್ರಕ್ರಿಯೆಗಳನ್ನು ಸಿಐಡಿ ಪೊಲೀಸರು ಆರಂಭಿಸಿದ್ದಾರೆ. ಸಿಐಡಿ ಎಸ್‌ಪಿ ವೆಂಕಟೇಶ್ ನೇತೃತ್ವದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಆತನನ್ನು ವಶಕ್ಕೆ ಪಡೆಯಲು ತೀರ್ಮಾನಿಸಿದ್ದಾರೆ. ಅನಂತರ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆಯೂ ಇದೆ.
ಕಿಮ್ಸ್ ಆಸ್ಪತ್ರೆಯಲ್ಲೂ ಆರೋಪಿ ಕಿರಿಕ್ !
ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಆಸ್ಪತ್ರೆಯಲ್ಲಿಯೂ ಸಿಬ್ಬಂದಿ ಜತೆಗೆ ಕಿರಿಕ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿಗೂ ಧಮಕಿ ಹಾಕಿದ್ದು, ಸಿಬ್ಬಂದಿ ಆತನ ವರ್ತನೆಯಿಂದ ಭಯಭೀತರಾಗಿದ್ದರು. ಆಯಾ ಕೆಲಸ ಮಾಡುವ ಒಬ್ಬರನ್ನು ಬೆದರಿಸಿದ್ದ ಎನ್ನಲಾಗಿದೆ. ಹೀಗಾಗಿ ಕೊಠಡಿಗೆ ಏಳು ಜನ ಪೊಲೀಸರನ್ನು ಕಾವಲಿಗೆ ಹಾಕಲಾಗಿತ್ತು.