ಸುದ್ದಿ

BAGALKOTE : ಕಾರು ಬ್ಲಾಸ್ಟ್ ಪ್ರಕರಣಕ್ಕೆ ಟ್ವಿಸ್ಟ್: ಹಣಕ್ಕಾಗಿ ಕೊಲೆಗೆ ಸಂಚು, ನಾಲ್ವರು ಅರೆಸ್ಟ್​ !

Share It

ಬಾಗಲಕೋಟೆ: ಇತ್ತೀಚೆಗೆ ನಡೆದಿದ್ದ ಕಾರು ಸ್ಪೋಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಮಾಡುವ ಉದ್ದೇಶದಿಂದ ಕಾರು ಬ್ಲಾಸ್ಟ್ ಮಾಡಲಾಗಿತ್ತು ಎಂಬ ವಿಷಯ ಬಹಿರಂಗವಾಗಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೋರ್ವನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಹಣಕ್ಕಾಗಿ ವ್ಯಕ್ತಿಯೋರ್ವನ ಕೊಲೆ ಮಾಡುವ ಉದ್ದೇಶದಿಂದ ಕಾರು ಸ್ಪೋಟ ಮಾಡಲಾಗಿದೆ. ಜುಲೈ 25ರಂದು ರಾತ್ರಿ 10:45 ಸುಮಾರಿಗೆ ಕಾರ್ ಬ್ಲಾಸ್ಟ್ ಆಗಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿತ್ತು. ಬಾಂಬ್ ನಿಷ್ಕ್ರಿಯದಳ, ಎಫ್​​ಎಸ್​​ಎಲ್ ತಂಡದಿಂದ ಪರಿಶೀಲನೆ ಮಾಡಲಾಗಿತ್ತು. ಪ್ರಾಥಮಿಕವಾಗಿ ಎಫ್​​ಎಸ್​​ಎಲ್ ವರದಿ ಪ್ರಕಾರ, ಸ್ಫೋಟಕ ಬಳಸಿದ್ದು ಗೊತ್ತಾಗಿದೆ. ಆದರೆ ಪ್ರಕರಣದ ಆರೋಪಿಗಳು ಪತ್ತೆಯಾಗುವವರೆಗೆ ನಾವು ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದರು.

ಪ್ರಕರಣದ ಎ1 ಆರೋಪಿ ಶಿವಾನಂದ ಅವರ ದೊಡ್ಡಪ್ಪನಿಗೆ ಸ್ಫೋಟಗೊಂಡಿದ್ದ ಕಾರಿನ ಮಾಲೀಕ (ಬಾರ್​ ಮಾಲೀಕ) ​ಹನಮಂತ 40 ಲಕ್ಷ ರೂ. ಸಾಲ ಕೊಟ್ಟಿದ್ದರು. ಸಾಲ ವಾಪಸ್ ಕೊಡದೇ ಇರುವುದಕ್ಕೆ ಶಿವಾನಂದ ಅವರ 5 ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಅದೇ ಜಮೀನನ್ನು ಶಿವಾನಂದ ಲೀಸ್ ಪಡೆದು ವರ್ಷಕ್ಕೊಂದರಂತೆ ಕಂತು ರೂಪದಲ್ಲಿ ಸಾಲ ತೀರಿಸುತ್ತೇನೆ ಅಂತ ಹೇಳಿದ್ದರು. ಒಮ್ಮೆ ಸ್ವಲ್ಪ ಹಣ ವಾಪಸ್ ಕೊಟ್ಟ ಬಳಿಕವೂ, ಬಡ್ಡಿ ಜಾಸ್ತಿ ಆಗಿ ಒಟ್ಟು 67 ಲಕ್ಷ ರೂ. ಸಾಲ ಆಗಿತ್ತು. ಇದರಿಂದ ಹನಮಂತನನ್ನು ಕೊಲೆ ಮಾಡಿದರೆ, ಜಮೀನು ತಮಗೆ ಸಿಗುತ್ತೆ ಅಂತ ಪ್ಲಾನ್ ಮಾಡಿದ್ದರು ಎಂದು ಎಸ್​ಪಿ ಮಾಹಿತಿ ನೀಡಿದರು.

ಶಿವಾನಂದಗೆ ಸ್ಫೋಟಕ ತಯಾರಿಸುವುದು ಗೊತ್ತಿರುತ್ತದೆ. ಹೀಗಾಗಿ ಎರಡು ಅಂಗಡಿಗಳಲ್ಲಿ ಜಿಲೆಟಿನ್ ಕಡ್ಡಿ ಖರೀದಿ ಮಾಡಿ, ಜಮೀನಿನಲ್ಲಿ ಪ್ರಯೋಗ ಮಾಡುತ್ತಾರೆ. ಬಳಿಕ ಸುಮಾರು 800 ಜಿಲೆಟಿನ್ ಕಡ್ಡಿ ಕೆಪಾಸಿಟರ್, ಡಿಟೋನೆಟ್ ಖರೀದಿ ಮಾಡಿರುತ್ತಾರೆ. ಅದರಲ್ಲಿ 25ರಿಂದ 30 ಕಡ್ಡಿ ಬಳಸಿ ಸ್ಪೋಟಕ ತಯಾರಿಸಿ ಕಾರಿನ​​ ಕೆಳಗೆ ಇಟ್ಟು, ಕೊಲೆ ಮಾಡುವ ಸಂಚು ರೂಪಿಸಿದ್ದರು. 100 ಮೀಟರ್ ದೂರದಲ್ಲಿ ಕೂತು, ಹನಮಂತ ಅವರು ಕಾರು ಹತ್ತುವಾಗ ಬ್ಲಾಸ್ಟ್ ಮಾಡುತ್ತಾರೆ. ಬಳಿಕ ಸ್ಥಳದಲ್ಲಿ ಉಳಿದ ವೈಯರ್ ಸೇರಿ ಸ್ಫೋಟಕ ಅವಶೇಷಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಸಿಸಿಟಿವಿ ಕ್ಯಾಮರಾ ಮತ್ತು ಮೊಬೈಲ್​​ಗಳಲ್ಲಿ ಯಾವುದೇ ಸುಳಿವು ಸಿಗದಂತೆ ಪ್ಲಾನ್ ಮಾಡಿರುವುದು ಕಂಡು ಬಂದಿದೆ ಎಂದು ಎಸ್​ಪಿ ಹೇಳಿದರು.

ಮಾರನೇ ದಿನ ಸುದ್ದಿ ನೋಡಿ ಹನಮಂತಗೆ ಏನೂ ಆಗಿಲ್ಲ ಅಂತ ಗೊತ್ತಾಗುತ್ತೆ. ಬಳಿಕ 6ನೇ ತಾರೀಖು ವಾಟ್ಸ್​ಆ್ಯಪ್ ಮೆಸೇಜ್ ಮಾಡಿ ಮತ್ತೆ ಬೆದರಿಕೆ ಹಾಕುತ್ತಾರೆ. ನಂಬರ್ ಪತ್ತೆಗಾಗಿ ತನಿಖೆ ಶುರು ಮಾಡಿದಾಗ, ಒಂದು ಡೈರಿ ಫಾರ್ಮ್​ನಲ್ಲಿ ಸಿಸಿಟಿವಿ ಕ್ಯಾಮರಾ ಕಳ್ಳತನ ಮಾಡಿ ಅದರಲ್ಲಿನ ಸಿಮ್ ಬಳಸಿರುವುದು ಪತ್ತೆ ಆಗುತ್ತದೆ. ಅಥಣಿಯಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿ ಮಾಡಿ ಮೆಸೇಜ್ ಮಾಡಿದ್ದು, ತಿಳಿಯುತ್ತೆ. ಬಳಿಕ ಈ ಸಂಬಂಧ ವಿಜಯಪುರ ಜಿಲ್ಲೆಯಿಂದ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಶಿವಾನಂದ ಪರಸಪ್ಪ ಜಾಲಿ (29), ರೇವನ್​ ಸಂಗಪ್ಪ ಜಾಲಿ (24), ಮಹಾದೇವ ಸಂಗಪುರ (21) ಹಾಗೂ ಮಲ್ಲಿಕಾರ್ಜುನ ಭದ್ರನವರ್ (23) ಬಂಧಿತರಾಗಿದ್ದು, ಸ್ಫೋಟಕ ಖರೀದಿಗೆ ನೆರವಾಗಿದ್ದ ಗಜಾನನ ಎಂಬ ಆರೋಪಿಯನ್ನು ಬಂಧಿಸಬೇಕಿದೆ​. ಜಿಲೆಟಿನ್ ಕಡ್ಡಿ ಮಾರಾಟ ಮಾಡಿದ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಎಸ್​ಪಿ ಸಿದ್ದಾರ್ಥ ಗೋಯಲ್ ವಿವರಿಸಿದರು.


Share It

You cannot copy content of this page