ರಾಜಕೀಯ ಸುದ್ದಿ

ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ನಿರ್ಧಾರ ಕೈಗೊಳ್ಳಬಾರದು: ಬಿ.ವೈ. ವಿಜಯೇಂದ್ರ

Share It

ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ, ಅದರಲ್ಲೂ ರಾಜ್ಯದ ಮುಖ್ಯಮಂತ್ರಿಗಳಿಗೆ ರೈತರ ಮೇಲೆ, ವಿಶೇಷವಾಗಿ ಅಡಿಕೆ ಬೆಳೆಗಾರರ ಮೇಲೆ ಗದಾಪ್ರಹಾರ ಮಾಡುವಂತಹ ಯಾವುದಾದರೂ ಪ್ರಯತ್ನ ಅಥವಾ ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಅನುಮಾನ ಇಂದು ರಾಜ್ಯದ ಅಡಿಕೆ ಬೆಳೆಗಾರರಲ್ಲಿ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು.

ಮಲೆನಾಡು, ನಮ್ಮ ಶಿವಮೊಗ್ಗ ಜಿಲ್ಲೆ, ಕರಾವಳಿ ಭಾಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಡಿಕೆಯನ್ನು ಪ್ರಮುಖ ಬೆಳೆಯಾಗಿ ರೈತರು ಬೆಳೆಯುತ್ತಿದ್ದಾರೆ. ಇಡೀ ದೇಶದಲ್ಲಿ ಸುಮಾರು 9.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಅದರಲ್ಲಿ ಸುಮಾರು 6.76 ಲಕ್ಷ ಹೆಕ್ಟೇರ್ ಪ್ರದೇಶ ಕರ್ನಾಟಕ ರಾಜ್ಯದಲ್ಲೇ ಇದೆ. ಅಂದರೆ, ದೇಶದ ಒಟ್ಟು ಅಡಿಕೆ ಬೆಳೆಯುವ ಪ್ರದೇಶದಲ್ಲಿ ಸುಮಾರು 76ರಷ್ಟು ಪಾಲು ಕರ್ನಾಟಕದ್ದಾಗಿದೆ ಎಂದು ಅವರು ತಿಳಿಸಿದರು.

ಅಡಿಕೆ ಕ್ಷೇತ್ರದಿಂದ ಸರ್ಕಾರಕ್ಕೆ ದೊರೆಯುತ್ತಿರುವ ಜಿಎಸ್‌ಟಿ ಆದಾಯವೂ ಗಮನಾರ್ಹವಾಗಿದೆ. ಸುಮಾರು ₹600 ಕೋಟಿ ಜಿಎಸ್‌ಟಿ ಆದಾಯದಲ್ಲಿ ₹450 ಕೋಟಿಗೂ ಹೆಚ್ಚು ಮೊತ್ತ ಕರ್ನಾಟಕ ರಾಜ್ಯದಿಂದಲೇ ಬರುತ್ತಿದೆ. ಇಷ್ಟೆಲ್ಲಾ ಮಾಹಿತಿ ರಾಜ್ಯ ಸರ್ಕಾರದ ಮುಂದಿದ್ದರೂ, ಇದೀಗ ಗುಟ್ಕಾ ನಿಷೇಧ ಮಾಡುತ್ತೇವೆ ಎಂದು ಹೇಳುವ ಮೂಲಕ ಅಡಿಕೆ ಬೆಳೆಗಾರರಲ್ಲಿ ಭಯ ಮತ್ತು ಆತಂಕ ಮೂಡಿಸುವ ಕೆಲಸ ಸರ್ಕಾರದ ಕಡೆಯಿಂದ ನಡೆಯುತ್ತಿರುವುದು ಸರಿಯಲ್ಲ ಎಂದು ವಿಜಯೇಂದ್ರ ಅವರು ಹೇಳಿದರು.

ಈ ವಿಚಾರವಾಗಿ ಈಗಾಗಲೇ ಅರಗ ಜ್ಞಾನೇಂದ್ರ, ಹರೀಶ್ ಪೂಂಜಾ ಸೇರಿದಂತೆ ಮಲೆನಾಡು ಹಾಗೂ ರಾಜ್ಯದ ವಿವಿಧ ಶಾಸಕರೊಂದಿಗೆ ಚರ್ಚೆ ನಡೆಸಿದ್ದೇನೆ. ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಗಳೊಂದಿಗೂ ಮಾತನಾಡಿದ್ದೇನೆ.

ಸೋಮವಾರ ಅಥವಾ ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸಮಯ ನೀಡುವಂತೆ ಮನವಿ ಮಾಡಿದ್ದೇನೆ. ಕ್ಯಾಂಪ್ಕೋ ಸೇರಿದಂತೆ ಅಡಿಕೆ ಬೆಳೆಗಾರರ ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಅಡಿಕೆ ಬೆಳೆಗಾರರ ಆತಂಕ, ಸಮಸ್ಯೆ ಮತ್ತು ಅವರ ಹಿತಾಸಕ್ತಿಯ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರಕ್ಕೆ ನಾನು ಸ್ಪಷ್ಟವಾಗಿ ಆಗ್ರಹಿಸುವುದೇನೆಂದರೆ, ರೈತರಿಗೆ ತೊಂದರೆ ಆಗುವಂತಹ, ಅಡಿಕೆ ಬೆಳೆಗಾರರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವಂತಹ ಯಾವುದೇ ನಿರ್ಧಾರವನ್ನು ಈ ಸಂದರ್ಭದಲ್ಲಿ ಕೈಗೊಳ್ಳಬಾರದು. ಯಾವುದೇ ನೀತಿ ರೂಪಿಸುವ ಮೊದಲು ಅಡಿಕೆ ಬೆಳೆಗಾರರು, ಕ್ಯಾಂಪ್ಕೋ ಹಾಗೂ ಸಂಬಂಧಿಸಿದ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಬೇಕು.

ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ. ಅಡಿಕೆ ಬೆಳೆಗಾರರ ಪರವಾಗಿ ನಾವು ಸದಾ ಧ್ವನಿ ಎತ್ತುತ್ತೇವೆ ಮತ್ತು ಅವರ ಹಿತಾಸಕ್ತಿಯ ರಕ್ಷಣೆಗೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದರು.


Share It

You cannot copy content of this page