ಬೆಂಗಳೂರು: ಕೆಲವರಿಗೆ ಒಂಟಿತನವೇ ದೊಡ್ಡ ಶಿಕ್ಷೆ. ಸದಾ ಜನರೊಂದಿಗೆ ಇರುತ್ತಿದ್ದ ಮಾಜಿ ಸಚಿವರೊಬ್ಬರು, ಜೈಲಿನಲ್ಲಿ ಒಂಟಿಯಾಗಿ ಕಳೆಯಬೇಕೆಂದರೆ ಅದೆಷ್ಟು ಘೋರ ಎಂಬುದು ಅರ್ಥವಾಗುತ್ತದೆ. ಇದೇ ಅವಸ್ಥೆಯಲ್ಲಿ ಜೈಲಿನಲ್ಲಿ ಮೂರು ದಿನ ಕಳೆದಿದ್ದಾರೆ ಮಾಜಿ ಸಚಿವ ಎಚ್.ಡಿ.ರೇವಣ್ಣ.
ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಮೇಲೆ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನವಾಗಿರುವ ರೇವಣ್ಣ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ವಕೀಲರು ಮತ್ತು ಕೆಲ ಆಯ್ದವರನ್ನು ಮಾತ್ರ ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಕಳೆದ ಮೂರು ದಿನಗಳಿಂದ ಯಾರ ಭೇಟಿಗೂ ಅವಕಾಶ ಸಿಕ್ಕಿಲ್ಲ.
ಕಳೆದ ಮೂರು ದಿನದಿಂದ ಸರಕಾರಿ ರಜೆಯಾದ ಕಾರಣಕ್ಕೆ ರೇವಣ್ಣ ಭೇಟಿಗೆ ಯಾರಿಗೂ ಅವಕಾಶ ಸಿಕ್ಕಿಲ್ಲ. ಇದರಿಂದಾಗಿ ರೇವಣ್ಣ ಅವರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಮಾಜಿ ಮಾಜಿವ ಅರಕಲಗೂಡು ಶಾಸಕ ಎ.ಮಂಜು ಮತ್ತು ಶ್ರವಣಬೆಳೊಳ ಶಾಸಕ ಬಾಲಕೃಷ್ಣ ರೇವಣ್ಣ ಭೇಟಿ ಮಾಡಿದ್ದರು. ಅನಂತರ ಮತ್ಯಾರಿಗೂ ಭೇಟಿಗೆ ಅವಕಾಶವೇ ಸಿಕ್ಕಿಲ್ಲ.
ಸರಕಾರಿ ರಜಾದಿನಗಳಲ್ಲಿ ಕುಟುಂಬಸ್ಥರಿಗಾಗಲೀ, ಆಪ್ತರಿಗಾಗಲೀ ಭೇಟಿಗೆ ಅವಕಾಶ ಕೊಡುವುದಿಲ್ಲ ಎಂದು ಈ ಮೊದಲೇ ಜೈಲಿನ ಅಧಿಕಾರಿಗಳು ಹೇಳಿದ್ದರು. ಅಂತೆಯೇ ಮೂರು ದಿನದಿಂದ ಯಾರ ಭೇಟಿಗೂ ಅವಕಾಶ ಸಿಕ್ಕಿಲ್ಲ. ಇದರಿಂದಾಗಿ ರೇವಣ್ಣ ಅವರು ಮಾನಸಿಕವಾಗಿ ನೊಂದಿದ್ದಾರೆ. ಜೈಲಿನಲ್ಲಿ ಕೊಟ್ಟ ತರಕಾರಿ ಪಲಾವ್ ಸೇವಿಸಿ, ದಿನಪತ್ರಿಕೆ ಓಡಿ ಕಾಲಕಳೆಯುತ್ತಿದ್ದಾರೆ ಎನ್ನಲಾಗಿದೆ.
ರೇವಣ್ಣ ಸುಮಾರು ಮೂರು ದಶಕಗಳ ಕಾಲ ಅಧಿಕಾರದಲ್ಲಿರುವ ಕುಟುಂಬದಲ್ಲಿರುವವರು. ಸ್ವತಃ ಮಂತ್ರಿಯಾಗಿ, ತಂದೆ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ, ಸಹೋದರ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗಲೆಲ್ಲ ರೇವಣ್ಣ ಮನೆಗೆ ದಿನನಿತ್ಯ ಬೆಳಗ್ಗೆಯಾದರೆ, ನೂರಾರು ಜನ ಆಗಮಿಸುತ್ತಾರೆ. ಪ್ರಸ್ತುತ ಶಾಸಕರಾಗಿದ್ದರೂ, ನಿತ್ಯ ನೂರಾರು ಮಂದಿ ಅವರ ಮನೆಗೆ ಬರುತ್ತಿದ್ದರು.
ಅನೇಕರು ತಮ್ಮ ಗ್ರಾಮಗಳ, ತಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡು ರೇವಣ್ಣ ಅವರ ಮನೆಗೆ ಬರುತ್ತಿದ್ದರು. ಪಕ್ಷದ ಮುಖಂಡರು, ಕಾರ್ಯಕರ್ತರು ನಿತ್ಯ ಬಂದು ಚರ್ಚೆ ನಡೆಸುತ್ತಿದ್ದರು. ಇದೀಗ ಇದ್ಯಾವುದು ಇಲ್ಲದೆ ಕಾಲ ಕಳೆಯುವ ಪರಿಸ್ಥಿತಿ ರೇವಣ್ಣ ಅವರ ಮಾನಸಿಕ ನೆಮ್ಮದಿಯನ್ನು ಕೆಡಿಸಿದೆ. ಜೈಲಿನಲ್ಲಿ ಕಳೆಯುವ ಪ್ರತಿ ಗಳಿಗೆಯೂ ಹಿಂಸೆಯAತೆ ಭಾಸವಾಗುತ್ತಿದೆ ಎಂದು ರೇವಣ್ಣ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.