ರಾಜಕೀಯ ಸುದ್ದಿ

GBA ಚುನಾವಣೆ: ಇಂಟರ್ನಲ್ ಸರ್ವೆಗೆ ಬೆದರಿತಾ ಸರಕಾರ ?

Share It


ಜೂನ್ ತಿಂಗಳಲ್ಲಿ ಚುನಾವಣೆ ನಡೆದರೆ, ಕಾಂಗ್ರೆಸ್ ಗೆ ಭಾರಿ ಹಿನ್ನಡೆ:ಡ್ಯಾಮೇಜ್ ಕಂಟ್ರೋಲ್ ಗೆ ಮೂರು ತಿಂಗಳ ಕಾಲಾವಕಾಶ
ಬೆಂಗಳೂರು: ಬೆಂಗಳೂರಿನ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡು ಅದಾಗಲೇ ಆರು ವರ್ಷ ಕಳೆಯುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳ ಆಯ್ಕೆಗೆ ಸರಕಾರಗಳು ಮನಸ್ಸು ಮಾಡುತ್ತಿಲ್ಲ, ಸೋಲುವ ಭಯವೇ ಸರಕಾರಗಳ ಈ ನಿರ್ಲಕ್ಷ್ಯಕ್ಕೆ ಕಾರಣವಾ ಎಂಬ ಅನುಮಾನಗಳು ಮೂಡುತ್ತಿವೆ.

GBA ಉನಾವಣೆಯನ್ನು ಜೂನ್ 30 ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ, ಕೇವಲ ಎರಡು ತಿಂಗಳ ಅಂತರದಲ್ಲಿ ಚುನಾವಣೆ ನಡೆಸಲು ಸರಕಾರ ಸಿದ್ಧವಿರಲಿಲ್ಲ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂತರಿಕ ಸರ್ವೆ ನಡೆಸಿದ್ದು, ಸರ್ವೆ ಸಂಪೂರ್ಣವಾಗಿ ಸರಕಾರದ ವಿರುದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರ ಆಧಾರದಲ್ಲಿ ಚುನಾವಣೆಗೆ ಮತ್ತಷ್ಟು ಕಾಲಾವಕಾಶ ಪಡೆಯುವ ಪ್ರಯತ್ನವನ್ನು ಸರಕಾರ ನಡೆಸಿತು ಎನ್ನಲಾಗಿದೆ.

ಸರ್ವೆ ಪ್ರಕಾರ ಪ್ರಸ್ತುತ ಜೂನ್ ನಲ್ಲಿ ಚುನಾವಣೆ ನಡೆದರೆ, ಕಾಂಗ್ರೆಸ್ ಪಕ್ಷಕ್ಕೆ ಐದು GBA ಪೈಕಿ ಒಂದರಲ್ಲಿ ಮಾತ್ರ ಅಧಿಕಾರ ಪಡೆಯುವ ಸಾಧ್ಯತೆ ಇತ್ತು. 369 ವಾರ್ಡ್ ಗಳ ಪೈಕಿ 260 ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಕಾಂಗ್ರೆಸೇತರ ಕಾರ್ಪೊರೇಟರ್ ಗಳು ಆಯ್ಕೆಯಾಗಲಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ವರದಿ ನೀಡಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಚುನಾವಣೆ ತಡೆಯಲು ಕಾಲಾವಕಾಶದ ಮೊರೆ ಹೋಗಿದೆ.

ಮೂರು ತಿಂಗಳ ಕಾಲಾವಕಾಶ ಪಡೆದು, ಅಷ್ಟರಲ್ಲಿ ರಾಜಧಾನಿಗೆ ಸಂಬಂಧಿಸಿದ ಕೆಲವು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿ, ಅನಂತರ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ಹೋದರೆ, ಪಕ್ಷಕ್ಕೆ ಒಂದಷ್ಟು ಅನುಕೂಲವಾಗಬಹುದು ಎಂಬ ಸಲಹೆಯನ್ನು ವರದಿಯಲ್ಲಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರ SIR ಮತ್ತು ಜನಗಣತಿ ನೆಪವೊಡ್ಡಿ, ಕಾಲಾವಕಾಶಕ್ಕೆ ಮನವಿ ಮಾಡಿಕೊಂಡಿತ್ತು.

ಸರಕಾರದ ಮನವಿಗೆ ಸಿಡುಕಿದ ಸುಪ್ರೀಂ ಕೋರ್ಟ್, ಇದು ನಿಮಗೆ ಕೊನೆಯ ಅವಕಾಶವಾಗಿದ್ದು, ಮತ್ತೊಮ್ಮೆ ಕಾಲಾವಕಾಶಕ್ಕಾಗಿ ನ್ಯಾಯಾಲಯದ ಮುಂದೆ ಬರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳುವ ಜತೆಗೆ, ಎರಡು ತಿಂಗಳ ಕಾಲ ಅವಧಿ ವಿಸ್ತರಣೆ ಮಾಡಿ, ಆಗಸ್ಟ್ 31 ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.
ಜನಪ್ರತಿನಿಧಿಗಳಿಲ್ಲದೆ ನಗರದಲ್ಲಿ ಜನ ರೋಸಿ ಹೋಗಿದ್ದಾರೆ. ಅಧಿಕಾರಿಗಳು ವಾರ್ಡ್ ಸಮಸ್ಯೆಗಳಿಗೆ ಸೊಪ್ಪು ಹಾಕುತ್ತಿಲ್ಲ. ಮೊದಲಿಗೆ ಬಿಜೆಪಿ ಸರಕಾರ ಮೂರು ವರ್ಷ ಚುನಾವಣೆ ನಡೆಯದಂತೆ ತಡೆದರೆ, ಇದೀಗ ಕಾಂಗ್ರೆಸ್ ಸರಕಾರವೂ ಚುನಾವಣೆ ತಡೆಯುವ ಪ್ರಯತ್ನಗಳನ್ನು ನಡೆಸುತ್ತಿದೆ. ಇದಕ್ಕೆಲ್ಲ ಫುಲ್ ಸ್ಟಾಪ್ ಇಟ್ಟಿರುವ ನ್ಯಾಯಾಲಯ ಆಗಸ್ಟ್ ಗಡುವು ನೀಡಿದೆ. ಅದರಂತೆ ಸರಕಾರ ಚುನಾವಣೆ ನಡೆಸುತ್ತಾ ಅಥವಾ ಮತ್ತೇ ಮುಂದೂಡಲು ಇರುವ ಅವಕಾಶಗಳ ಹುಡುಕಾಟ ನಡೆಸುತ್ತಾ ಎಂಬುದು ಕುತೂಹಲದ ಸಂಗತಿಯಾಗಿದೆ.


Share It

You cannot copy content of this page