ಚನ್ನರಾಯಪಟ್ಟಣ: ಚಾಲಕನ ನಿಯಂತ್ರಣ ತಪ್ಪಿ (Accident) ಹೇಮಾವತಿ ನಾಲೆಗೆ ಸ್ವಿಫ್ಟ್ ಕಾರು ಬಿದ್ದು ಪರಿಣಾಮ ತಾಯಿ ಸೇರಿದಂತೆ ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಲ್ಲನಘಟ್ಟ ಬಳಿ ನಡೆದಿದೆ. ಪ್ರಿಯಾಂಕಾ(30) ಮತ್ತು ಮಗು ವೈಭವ್ ಮೃತರು. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ದೇವನಹಳ್ಳಿ ಮೂಲದ ಕುಟುಂಬವು ಸ್ವಿಫ್ಟ್ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ಮರಳಿ ಬರುತ್ತಿದ್ದರು. ಚನ್ನರಾಯಪಟ್ಟಣ ತಾಲೂಕಿನ ಮಲ್ಲನಘಟ್ಟ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ಹೇಮಾವತಿ ನಾಲೆಗೆ ಬಿದ್ದಿದೆ. ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

