ಬೆಂಗಳೂರು: ಪತ್ನಿಯಿಂದ ಆಗುತ್ತಿರುವ ಮಾನಸಿಕ ಕ್ರೌರ್ಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಪತಿ ವಿವಾಹ ವಿಚ್ಛೇದನ ಪಡೆದುಕೊಳ್ಳಲು ಸಫಲರಾಗಿದ್ದಾರೆ.
ಪತ್ನಿಯಿಂದ ಆಗುತ್ತಿರುವ ಮಾನಸಿಕ ಕ್ರೌರ್ಯದಿಂದಾಗಿ ತನಗೆ ವಿಚ್ಚೇಧನ ಬೇಕು ಎಂದು ಮೈಸೂರಿನ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಮೈಸೂರಿನ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ಹೈಕೋರ್ಟ್ ಪೀಠ, ಪತಿಯ ಮೇಲಿನ ಕ್ರೌರ್ಯವನ್ನು ಪರಿಗಣಿಸಿ, ಆತ ಕೂಡ ಅರ್ಜಿ ಸಲ್ಲಿಸಲು ಅರ್ಹನಾಗಿದ್ದು, ವಿಚ್ಛೇದನ ನೀಡಬಹುದು ಎಂದು ಅಭಿಪ್ರಾಯಪಟ್ಟಿತು.
ಮೈಸೂರಿನ ವ್ಯಕ್ತಿಯೊಬ್ಬರು ೨೦೦೭ರ ಜ.೨೮ರಂದು ಮದುವೆಯಾಗಿದ್ದರು. ಅವರಿಗೆ ೨೦೧೦ರಲ್ಲಿ ಒಂದು ಗಂಡು ಮಗು ಜನಿಸಿತ್ತು. ಆನಂತರ ಮಹಿಳೆ ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದರು. ಪ್ರಕರಣದಲ್ಲಿ ಪೊಲೀಸರು ತನಿಖೆ ನಂತರ ಬಿ ರಿಪೋರ್ಟ್ ಸಲ್ಲಿಸಿದ್ದರು. ಬಳಿಕ, ಪತಿಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬAಧವಿದೆ ಎಂದು ಆರೋಪಿಸಿದ್ದರು.
ಇದರಿಂದ ಬೇಸತ್ತ ಪತಿ ೨೦೧೮ರಲ್ಲಿ ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಬಳಿಕ ಸ್ನೇಹಿತರು ಹಾಗೂ ಕುಟುಂಬದವರ ಸಲಹೆ ಮೇರೆಗೆ ಅರ್ಜಿ ವಾಪಸ್ ಪಡೆದಿದ್ದರು. ಆನಂತರ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ೨೦೧೯ರಲ್ಲಿ ಹೊಸದಾಗಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನು ಮೈಸೂರಿನ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.
ಪತಿ ಸಲ್ಲಿಸಿದ್ದ ಮೇಲ್ಮನವಿ ಅಲಿಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ಜತೆಗೆ ಪತಿಯೊಬ್ಬ ತನ್ನ ಮೊದಲನೇ ವಿವಾಹ ವಿಚ್ಚೇದನ ಅರ್ಜಿ ತಿರಸ್ಕೃತಗೊಂಡ ನಂತರ ಸಲ್ಲಿಸಿದ್ದ ಎರಡನೇ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ, ಮೈಸೂರಿನ ನ್ಯಾಯಾಲಯದ ಆದೇಶ ರದ್ದುಗೊಳಿಸಿ ವಿಚ್ಚೇದನ ಮಂಜೂರು ಮಾಡಿದೆ.
ಪತಿ ತನ್ನ ಮಗನಿಗಾಗಿ ಕಾನೂನು ಬದ್ಧ ಕರ್ತವ್ಯಗಳನ್ನು ಪಾಲನೆ ಮಾಡದಿದ್ದರೂ ಸಹ ಆತ ತನ್ನ ವಿರುದ್ಧ ಪತ್ನಿಯ ಮಾನಸಿಕ ಕೌರ್ಯವನ್ನು ಸಾಬೀತುಪಡಿಸಿದರೆ ಸಾಕು, ಅತನಿಗೆ ವಿವಾಹ ವಿಚ್ಚೇದನ ಮಂಜೂರು ಮಾಡಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.