ಉಪಯುಕ್ತ ಫ್ಯಾಷನ್ ಸುದ್ದಿ

ಬ್ಯಾಗ್ ಗೆ ಹೆಚ್ಚುವರಿ ಹಣ ಕೇಳಿದ್ರೆ ಬೀಳುತ್ತೆ ದಂಡ !

Share It


ದಾವಣಗೆರೆ: ಮಾಲ್ ಗಳಲ್ಲಿ ಹೊಸ ಸಂಪ್ರದಾಯ ಸೃಷ್ಟಿಯಾಗಿದೆ. ಏನೇ ಖರೀದಿ ಮಾಡಿದ್ರೂ ಕ್ಯಾರಿ ಬ್ಯಾಗ್ ಬೇಕು ಅಂದ್ರೆ ಎಕ್ಸ್‌ಟ್ರಾ ಹಣ ಕೊಡಲೇಬೇಕು.

ಆದರೆ, ಇನ್ನು ಮುಂದೆ ಕ್ಯಾರಿ ಬ್ಯಾಗ್ ಕೊಡೋಕೆ ಹೆಚ್ಚುವರಿ ಹಣ ಕೇಳಿದ್ರೆ ಕೇಸ್ ಹಾಕೋದನ್ನ ಮರೀಬೇಡಿ. ಯಾಕಂದ್ರೆ, ಇದೇ ತರಹ ಕ್ಯಾರಿ ಬ್ಯಾಗ್ ಕೊಡೋಕೆ ಎಕ್ಸ್‌ಟ್ರಾ ಹಣ ಕೇಳಿದ ಗ್ರಾಹಕರೊಬ್ಬರು, ಕೇಸ್ ಹಾಕಿ ಮಾಲ್ ಮಾಲೀಕರಿಂದ ಏಳು ಸಾವಿರ ದಂಡ ವಸೂಲಿ ಮಾಡಿದ್ದಾರೆ.

ಶಾಪಿಂಗ್ ಗೆ ಬರುವ ಗ್ರಾಹಕರ ಬಳಿ ಬ್ಯಾಗ್​ಗೆ ಹೆಚ್ಚುವರಿ ಹತ್ತು ರೂಪಾಯಿ ಪಡೆದ ವಾಣಿಜ್ಯ ಮಳಿಗೆಗೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 7000 ರೂಪಾಯಿ ದಂಡ ವಿಧಿಸಿದೆ. ವೃತ್ತಿಯಲ್ಲಿ ವಕೀಲರಾದ ಆರ್.ಬಸವರಾಜ್ ಅ​ವರು ಗುಂಡಿ ವೃತ್ತದಲ್ಲಿರುವ ರಿಟೈಲ್ ಬಟ್ಟೆ ಮಳಿಗೆಯಲ್ಲಿ ಅಕ್ಟೋಬರ್ 2023 ರಂದು 1499 ರೂ. ಪಾವತಿಸಿ ಪ್ಯಾಂಟ್ ವೊಂದನ್ನು ಖರೀದಿಸಿದ್ದರು.

ಆಗ ಲೈಫ್ ಸ್ಟೈಲ್ ಇಂಟರ್ ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್‌ಗೆ ಬ್ಯಾಗ್‌ ನೀಡಲು ಹೆಚ್ಚುವರಿಯಾಗಿ 10 ರೂಪಾಯಿ ಪಡೆದಿತ್ತು. ಅದನ್ನು ಅಂದು ವಕೀಲ ಆರ್. ಬಸವರಾಜ್ ಅವರು ಖಂಡಿಸಿ ಸಿಬ್ಬಂದಿಗೆ ಪ್ರಶ್ನಿಸಿದ್ದರು. ಬಳಿಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ಇನ್ನು ರಿಟೈಲ್ ಮಳಿಗೆ (ವಾಣಿಜ್ಯ ಸಂಸ್ಥೆ) ವಿರುದ್ಧ 50,000 ರೂ. ಮಾನಸಿಕ ಕಿರುಕುಳ ಮತ್ತು ದೂರು ದಾಖಲಿಸಲು ಖರ್ಚು ಮಾಡಿದ 10,000 ಪಾವತಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದರು. ಗ್ರಾಹಕರ ಆಯೋಗ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‌ಗಳಿಗೆ ಹೆಚ್ಚಿನ ಹಣ ಪಡೆಯುವಂತಿಲ್ಲ ಎಂಬ ಹಿಂದಿನ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ 10 ರೂ. ಪಡೆದ ಸಂಸ್ಥೆಯ ಕ್ರಮ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಅನುಚಿತ ವ್ಯಾಪಾರ ಪದ್ಧತಿ ಎಂದು ಪರಿಗಣಿಸಿ ತೀರ್ಪು ನೀಡಿದೆ.

ವಾದ ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್, ಬಿ.ಯು. ಗೀತಾ ವಾಣಿಜ್ಯ ಸಂಸ್ಥೆಗೆ 7000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.


Share It

You cannot copy content of this page