ಸುದ್ದಿ

ಭಾರತೀಯ ಮೂಲದ ನ್ಯಾಯತಜ್ಞೆ ನವನೀಥಂ ‘ನವಿ’ ಪಿಳ್ಳೈ ಅವರಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ

Share It

ಭಾರತೀಯ ತಮಿಳು ಮೂಲದ ಖ್ಯಾತ ದಕ್ಷಿಣ ಆಫ್ರಿಕಾದ ನ್ಯಾಯತಜ್ಞೆ ನವನೀಥಂ ‘ನವಿ’ ಪಿಳ್ಳೈ ಅವರಿಗೆ 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿನ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪಿಳ್ಳೈ ಅವರು ದಶಕಗಳಿಂದ ಸಾರ್ವತ್ರಿಕ ಕಾನೂನು ತತ್ವಗಳು, ಮಾನವ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ತೋರಿರುವ ಬದ್ಧತೆಯನ್ನು ಪರಿಗಣಿಸಿ, ನಾರ್ವೆಯ ಓಸ್ಲೋದಲ್ಲಿ ಶುಕ್ರವಾರ ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಪ್ರಶಸ್ತಿಯನ್ನು ಘೋಷಿಸಿದೆ.

“ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನವನೀಥಂ ‘ನವಿ’ ಪಿಳ್ಳೈ ಅವರು ಮಾಡಿದ ಪ್ರಯತ್ನಗಳಿಗಾಗಿ, 2026ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅವರಿಗೆ ನೀಡಲು ನಾರ್ವೇಜಿಯನ್ ನೊಬೆಲ್ ಸಮಿತಿಯು ನಿರ್ಧರಿಸಿದೆ” ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಅಧಿಕೃತ ಹೇಳಿಕೆಯ ಪ್ರಕಾರ, ಈ ವರ್ಷದ ಪ್ರಶಸ್ತಿ ವಿಜೇತೆ ನವಿ ಪಿಳ್ಳೆ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಸಾರ್ವತ್ರಿಕ ಕಾನೂನು ತತ್ವಗಳಿಗೆ ಬದ್ಧತೆ ಮತ್ತು ದೃಢವಾದ ನೈತಿಕ ದಿಕ್ಸೂಚಿಯನ್ನು ಅಳವಡಿಸಿಕೊಂಡಿದ್ದರು ಎಂದು ವಿವರಿಸಲಾಗಿದೆ.

    ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ವರ್ಣಭೇದ ನೀತಿಯ ಸಂದರ್ಭದಲ್ಲಿ ಭಾರತೀಯ ತಮಿಳು ಮೂಲದ ಕುಟುಂಬದಲ್ಲಿ ಜನಿಸಿದ ಪಿಳ್ಳೆ ಅವರು ವಕೀಲೆ ಮತ್ತು ಕಾನೂನು ಪ್ರವರ್ತಕರಾಗಿ ಹೊರಹೊಮ್ಮಿದರು. ಅಲ್ಲಿ ಆಳವಾಗಿ ಬೇರೂರಿದ್ದ ತಾರತಮ್ಯ, ಪ್ರತ್ಯೇಕತೆ ಮತ್ತು ಬಹಿಷ್ಕಾರದ ಪರಿಸ್ಥಿತಿಯನ್ನು ಅವರು ಎದುರಿಸಿದರು. ವರ್ಣಭೇದ ನೀತಿಯ ವಿರುದ್ಧ ಎದ್ದುನಿಂತ ನೆಲ್ಸನ್ ಮಂಡೇಲಾ ಮತ್ತು ಇತರರನ್ನು ಸಮರ್ಥಿಸುವ ಅವರ ಆರಂಭಿಕ ಕಾರ್ಯದಿಂದ ಹಿಡಿದು, ಈಗಿನ ಕಾಲದ ಕೆಲವು ಪ್ರಮುಖ ಅಂತಾರಾಷ್ಟ್ರೀಯ ನ್ಯಾಯಾಲಯದ ಪ್ರಕರಣಗಳಲ್ಲಿ ನ್ಯಾಯಾಧೀಶರಾಗಿ ಅವರು ಸೇವೆ ಸಲ್ಲಿಸಿರುವುದು ಗಮನಾರ್ಹವಾಗಿದೆ.


    Share It

    You cannot copy content of this page