ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರ ಅವರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ನನ್ನು ಪೊಲೀಸರು ಬಂಧಿಸಿದ್ದು, ಅವನ ಬಂಧನದ ಹಿಂದಿನ ರೋಚಕ ಕತೆ ಇಲ್ಲಿದೆ.
ಮಂಗಳವಾರ ಬೆಳಗಿನ ಜಾವ 5.30 ಕ್ಕೆ ಯುವತಿ ಅಂಜಲಿಯನ್ನು ಇರಿದು ಕೊಂದಿದ್ದ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಅಲ್ಲಿಂದ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದ. ಅಕ್ಕಪಕ್ಕದ ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆತ ಓಡಿಹೋಗಿರುವ ದೃಶ್ಯ ಸೆರೆಯಾಗಿತ್ತು. ಇದರ ಆಧಾರದಲ್ಲಿ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಆದರೆ, ಆರೋಪಿ ಗಿರೀಶ್, ಹುಬ್ಬಳ್ಳಿಯಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ, ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಅಡ್ಡಾಡಿ, ಕಡೆಗೆ ವಾಪಸ್ ಹುಬ್ಬಳ್ಳಿಗೆ ತೆರಳುತ್ತಿದ್ದ ಎನ್ನಲಾಗಿದೆ. ಈ ವೇಳೆ ದಾವಣಗೆರೆಯಲ್ಲಿ ಪ್ರಯಾಣಿಕರೊಂದಿಗೆ ಕಿರಿಕ್ ಮಾಡಿಕೊಂಡು, ಗೂಸಾ ತಿಂದು ಕೊನೆಗೆ ರೈಲಿನಿಂದ ಕೆಳಕ್ಕೆ ಜಿಗಿದಿದ್ದ ಎನ್ನಲಾಗಿದೆ.
ರೈಲಿನಲ್ಲಿ ಪ್ರಯಾಣಿಕರ ಜತೆಗೆ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಮಾಡಿಕೊಂಡಿದ್ದಾನೆ. ಅನಂತರ ಅವರೊಂದಿಗೆ ಹೊಡೆದಾಟಕ್ಕೆ ಇಳಿದಿದ್ದಾನೆ. ಆಕ್ರೋಶಗೊಂಡ ಪ್ರಯಾಣಿಕರು ಆತನನ್ನು ಥಳಿಸಿದ್ದಾರೆ. ಅಲ್ಲೇ ಇದ್ದರೆ, ಮತ್ತಷ್ಟು ಹೊಡೆತ ಬೀಳುತ್ತವೆ ಎಂಬ ಭಯದಿಂದ ಆತ ದಾವಣಗೆರೆಯಲ್ಲಿ ರೈಲಿನಿಂದ ಕೆಳಗೆ ನೆಗೆದಿದ್ದಾನೆ.
ಈ ವೇಳೆ ರೈಲ್ವೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿ ವಿಚಾರಣೆ ನಡೆಸಿದಾಗ ಆತ ಅಂಜಲಿ ಕೊಲೆ ಆರೋಪಿ ಎಂಬುದು ಗೊತ್ತಾಗಿದೆ. ರೈಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಆತನಿಗೆ ಚಿಕಿತ್ಸೆ ಕೊಡಿಸಿ, ಹುಬ್ಬಳ್ಳಿ ಪೊಲೀಸರ ವಶಕ್ಕೆ ರೈಲ್ವೆ ಪೊಲೀಸರು ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಪೊಲೀಸರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಅವರು, ಗುರುವಾರ ರಾತ್ರಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಸಧ್ಯಕ್ಕೆ ಆರೋಪಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ, ಹೀಗಾಗಿ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತ ಚೇರಿಸಿಕೊಂಡ ನಂತರ ಹೇಳಿಕೆ ದಾಖಲು ಮಾಡಲಾಗುವುದು, ರೈಲಿನಿಂದ ಬಿದ್ದ ಕಾರಣಕ್ಕೆ ಆತನಿಗೆ ತಲೆ ಮತ್ತು ಮುಖಕ್ಕೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.