ರಾಜಕೀಯ ಸುದ್ದಿ

ನಿರ್ದೇಶಕರು, ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ತೀರ್ಮಾನದಂತೆ ಕೆಎಂಎಫ್ ಅಧ್ಯಕ್ಷರ ಆಯ್ಕೆ: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

Share It

ಚನ್ನಪಟ್ಟಣ; “ಹಾಲು ಒಕ್ಕೂಟಗಳ ನಿರ್ದೇಶಕರು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ಅಧ್ಯಕ್ಷರು ಏನು ತೀರ್ಮಾನ ಮಾಡುತ್ತಾರೋ ಅದರಂತೆ ಕೆಎಂಎಫ್ ಅಧ್ಯಕ್ಷ ಸ್ಥಾನ ನಿರ್ಧಾರವಾಗಲಿದೆ” ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.

ಚನ್ನಪಟ್ಟಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ನಂಜೇಗೌಡರು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಹಿಂದೆ ನೀವು ಅವರಿಗೆ ಮಾತು ಕೊಟ್ಟಿದ್ದಿರಂತೆ ಎಂದು ಕೇಳಿದಾಗ, “ನಂಜೇಗೌಡರು ಹಿರಿಯ ಶಾಸಕರು. ಅವರು ಕೂಡ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಅಂದಿನ ರಾಜಕೀಯ ಸಂದರ್ಭದಲ್ಲಿ ನಾವು ಅವರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದೆವು. ಇಂದು ಎಲ್ಲರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಇಲ್ಲಿ ಯಾರೂ ತರಾತುರಿಯಲ್ಲಿಲ್ಲ” ಎಂದು ತಿಳಿಸಿದರು.

ಯಾರಿಗೆ ಹೆಚ್ಚು ಮತ ಬರುತ್ತದೆಯೋ ಅವರು ಅಧ್ಯಕ್ಷರಾಗುತ್ತಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಸಧ್ಯಕ್ಕೆ ನಾನು ಬಮುಲ್ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಉಳಿದ ವಿಚಾರಗಳ ಬಗ್ಗೆ ದೊಡ್ಡ ನಾಯಕರನ್ನು ಕೇಳಿ” ಎಂದು ಹೇಳಿದರು. ನೀವು ಕೆಎಂಎಫ್ ಸ್ಥಾನದ ಆಕಾಂಕ್ಷಿಯಾಗಿದ್ದೀರಾ ಎಂದು ಕೇಳಿದಾಗ, “ನಾನು ಯಾವುದಕ್ಕೂ ಆಕಾಂಕ್ಷಿಯಲ್ಲ. ಬಮುಲ್ ಗೂ ಆಕಾಂಕ್ಷಿಯಾಗಿರಲಿಲ್ಲ. ನಾಳೆಯೇ ರಾಜೀನಾಮೆ ನೀಡಲು ಹೇಳಿದರೆ ನೀಡಲು ಸಿದ್ಧ” ಎಂದು ತಿಳಿಸಿದರು.

ಸುರೇಶ್ ಅವರಿಗೆ ಒಳ್ಳೆಯ ಸ್ಥಾನ ಸಿಗುವಂತೆ ಮಾಡಬೇಕು ಎಂಬುದು ಕೆಲ ಶಾಸಕರ ಅಭಿಪ್ರಾಯ ಎಂದು ಕೇಳಿದಾಗ, “ಇದು ಅವರ ಅಭಿಪ್ರಾಯ. ಇಲ್ಲಿ ತೀರ್ಮಾನ ಮಾಡಬೇಕಿರುವುದು ಒಕ್ಕೂಟಗಳ ನಿರ್ದೇಶಕರು ಹಾಗೂ ಸರ್ಕಾರ. ಅವರು ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.


Share It

You cannot copy content of this page