ಚನ್ನಪಟ್ಟಣ: “ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್ ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ತಿಳಿಸಿದರು.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ತರೆಯುವ ಬಗ್ಗೆ ಕೇಳಿದಾಗ, “ನಾವು ಈಗಾಗಲೇ ಈ ವಿಚಾರವಾಗಿ ಅರ್ಜಿ ಸಲ್ಲಿಸಿದ್ದು, ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಇದಾದ ನಂತರ ನಮಗೂ ಮೆಟ್ರೋ ಸಂಸ್ಥೆ ನಡುವೆ ಒಪ್ಪಂದ ಆಗಬೇಕಿದೆ. ಹೊರರಾಜ್ಯದ ಸಂಸ್ಥೆಗಳು ಹೆಚ್ಚಿನ ಬಾಡಿಗೆ ನೀಡುವ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಹೀಗಾಗಿ ಮೆಟ್ರೋದವರು ನಮ್ಮಿಂದಲೂ ಹೆಚ್ಚಿನ ಬಾಡಿಗೆ ನಿರೀಕ್ಷೆ ಮಾಡುತ್ತಾರೆ. ಇದು ರೈತರ ಸಂಸ್ಥೆಯಾಗಿರುವುದರಿಂದ ಕಡಿಮೆ ಬಾಡಿಗೆ ನೀಡಬೇಕು ಎಂದು ಉಪಮುಖ್ಯಮಂತ್ರಿಗಳು ಹಾಗೂ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇನೆ. ಸ್ಥಳ ಪರಿಶೀಲನೆ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಪ್ರಾಯೋಗಿಕ ಪರೀಕ್ಷೆ ನಂತರ ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಮಾರುಕಟ್ಟೆಗೆ: ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸುವ ಬಗ್ಗೆ ಕೇಳಿದಾಗ, “ಈಗ ಪ್ರಾಯೋಗಿಕವಾಗಿ ಬೆಂಗಳೂರಿನ ಒಂದು ಭಾಗ ಆಯ್ಕೆ ಮಾಡಲು ಸೂಚಿಸಿದ್ದೇನೆ. ಇದರ ವೆಚ್ಚ ಹೆಚ್ಚಾಗಿದ್ದು, ರಾಜ್ಯಮಟ್ಟದಲ್ಲಿ ಚರ್ಚೆ ಮಾಡಬೇಕಿದೆ. ನಮ್ಮ ಮಾರುಕಟ್ಟೆ ವ್ಯಾಪ್ತಿಯ ಜಯನಗರ, ಬಿಟಿಎಂ ಲೇಔಟ್ ಸೇರಿದಂತೆ ಯಾವ ಸ್ಥಳ ಸೂಕ್ತ ಎಂಬುದನ್ನು ಮಾರುಕಟ್ಟೆ ಅಧಿಕಾರಿಗಳು ಸೂಕ್ತ ಪರಿಶೀಲನೆ ಮಾಡುತ್ತಿದ್ದಾರೆ.
ಅತಿ ಶೀಘ್ರದಲ್ಲೇ ಬೆಂಗಳೂರಿನ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡುತ್ತೇವೆ. ಸ್ವಲ್ಪ ನಷ್ಟವಾದರೂ ಪರಿಸರ ರಕ್ಷಣೆಗೆ ದೊಡ್ಡ ಹೆಜ್ಜೆ ಇಡಲಾಗುವುದು. ಪರಿಸರದ ದೃಷ್ಟಿಯಿಂದ ಇದನ್ನು ನಾವು ಮಾಡಬೇಕು. ರಾಜ್ಯದಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿರುವುದೇ ಹಾಲಿನ ಪ್ಯಾಕೆಟ್ ಗಳಿಂದ. ನಿತ್ಯ ಕೋಟ್ಯಂತರ ಪ್ಲಾಸ್ಟಿಕ್ ಕವರ್ ತ್ಯಾಜ್ಯವಾಗಿ ಬೀಳುತ್ತಿವೆ. ಇವುಗಳನ್ನು ಕೊಳೆಯುವಂತೆ ಮಾಡುವ ವ್ಯವಸ್ಥೆ ಮಾಡುವುದು ನಮ್ಮ ಚಿಂತನೆ. ಈ ಪ್ರಾಯೋಗಿಕ ಪ್ರಯತ್ನದ ನಂತರ ಸರ್ಕಾರದ ಮುಂದೆ ಈ ಪ್ರಸ್ತಾಪವನ್ನಿಟ್ಟು ಸಾರ್ವಜನಿಕರ ವಿಶ್ವಾಸ ಗಳಿಸಿ ಮಾರುಕಟ್ಟೆಗೆ ಪರಿಚಯಿಸಲಾಗುವುದು” ಎಂದು ತಿಳಿಸಿದರು.
