ಬೆಂಗಳೂರು, ಮೇ11: ಕಳೆದ ಆರೇಳು ದಿನ ಸುರಿದ ಬೇಸಿಗೆ ಮಳೆ ಇಂದೂ ಕೂಡಾ ಬೆಂಗಳೂರು ನಗರದಲ್ಲಿ ಸುರಿಯುತ್ತಿದೆ. ಇದರಿಂದ ಬೆಂಗಳೂರಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಭಾನುವಾರ ಸಂಜೆಯಾಗುತ್ತಿದ್ದಂತೆ ಮಳೆಯ ಆರ್ಭಟ ಶುರುವಾಗುತ್ತಿದೆ. ಅದರಂತೆ ಇಂದು ಕೂಡ ನಗರದ ವಿಜಯನಗರ, ನಾಗರಭಾವಿ ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಶುರುವಾಗಿದೆ. ಇನ್ನುಳಿದಂತೆ ರಿಚ್ಮಂಡ್ ಸರ್ಕಲ್, ಮೆಜೆಸ್ಟಿಕ್, ಚಾಮರಾಜಪೇಟೆಯಲ್ಲಿ ಮೋಡ ಕವಿದ ವಾತಾವರಣವಿದೆ.
ಇಂದಿನಿಂದ ಮೇ 15ರವರೆಗೆ ಯೆಲ್ಲೋ ಅಲರ್ಟ್!: ರಾಜ್ಯದ ಹಲವೆಡೆ ಇಂದು ಭಾರಿ ಮಳೆಯಾಗಿದ್ದು, ಮೇ 12, 13, 14, 15 ಹೀಗೆ ನಾಲ್ಕು ದಿನಗಳ ಕಾಲ ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಬೆಂಗಳೂರಿನಲ್ಲಿ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದ್ದು, ಇಂದಿನಿಂದ ಮೇ 15ರವರೆಗೆ ಬೆಂಗಳೂರಿಗೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನು ಈ ವೇಳೆ ಲಘು ಪ್ರವಾಹ, ನೈಸರ್ಗಿಕ ಸಮಸ್ಯೆಗಳು ಎದುರಾಗುವ ಮುನ್ಸೂಚನೆ ನೀಡಿದೆ.
ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಭರ್ಜರಿ ಮಳೆ!: ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ಹಲವೆಡೆ ಇಂದು ಭಾನುವಾರ ಭಾರಿ ಮಳೆಯಾಗಿದೆ. ಕುಡಿಯುವ ನೀರಿಗೂ ಪರದಾಡುತ್ತಿದ್ದ ಬಯಲುಸೀಮೆ ಭಾಗದ ಜನರು, ಬಿಸಿಲಿನಿಂದ ಕಂಗೆಟ್ಟಿದ್ದರು. ಇದೀಗ ದಿಢೀರ್ ಬೇಸಿಗೆ ಮಳೆಯಿಂದ ಬಯಲುಸೀಮೆ ರೈತರಲ್ಲಿ ಮಂದಹಾಸ ಮೂಡಿದೆ. ಇನ್ನು ಧಾರಾಕಾರ ಮಳೆ ಹಿನ್ನೆಲೆ ಈ ಭಾಗದ ತೆಂಗು, ಅಡಿಕೆ ಬೆಳೆಗಾರರು, ರೈತರಲ್ಲಿ ಸಂತಸ ಮನೆ ಮಾಡಿದ.
ಮೈಸೂರು ಜಿಲ್ಲೆಯಲ್ಲೂ ಇಂದು ಉತ್ತಮ ಮಳೆಯಾಗಿದ್ದು, ಬಿರು ಬೇಸಿಗೆಯಿಂದ ಬಸವಳಿದಿದ್ದ ವನ್ಯಜೀವಿಗಳು ಖುಷಿಯಾಗಿವೆ. ನಾಗರಹೊಳೆ ಅಭಯಾರಣ್ಯ, ಕಬಿನಿ ಹಿನ್ನೀರಿನಲ್ಲಿ ವನ್ಯಜೀವಿಗಳ ಕಲರವ ಹೆಚ್ಚಾಗಿದ್ದು, ಗಜ ಸಮೂಹ ಕ್ರೀಡೆಯಲ್ಲಿ ತೊಡಗಿದೆ. ಜಿಂಕೆಗಳ ಸ್ವಚ್ಛಂದ ವಿಹಾರ, ಉತ್ತಮ ಮಳೆಯಿಂದಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಜೀವ ಕಳೆ ಬಂದಿದೆ. ಆನೆ, ಹುಲಿ, ಜಿಂಕೆ ಸೇರಿದಂತೆ ಎಲ್ಲಾ ಪ್ರಾಣಿಗಳ ಬಿಂದಾಸ್ ಓಡಾಟ ನಡೆಸಿವೆ.
ಇಷ್ಟಾದರೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನೂ ಮಳೆಯ ಆತಂಕದಿಂದ ಆತಿಥೇಯ ಆರ್.ಸಿ.ಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ರಾತ್ರಿ 7:30 ರಿಂದ ನಡೆಯಬೇಕಿರುವ ನಿರ್ಣಾಯಕ ಐಪಿಎಲ್ ಪಂದ್ಯಕ್ಕೆ ಮಳೆ ಬೆದರಿಕೆ ಒಡ್ಡಿದೆ. ಒಂದು ವೇಳೆ ಮಳೆ ಕಾರಣ ಪಂದ್ಯ ರದ್ದಾದರೆ ಆರ್.ಸಿ.ಬಿ ಇಂದೇ ಐಪಿಎಲ್-2024 ನ ಪ್ಲೇ ಆಫ್ ರೇಸ್ ನಿಂದ ಹೊರಬೀಳಲಿದೆ.