ಚೆನ್ನೈ: ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸುಲಭ ಗೆಲುವು ಸಾಧಿಸುವ ಮೂಲಕ ಪ್ಲೇ ಆಪ್ ಕನಸನ್ನು ಜೀವಂತವಾಗಿರಿಸಿಕೊ0ಡಿದೆ.
ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್‌ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತ್ತು. ರಾಜಸ್ಥಾನ ಪರ ರಿಯಾನ್ ಪರಾಗ್ ಹೊರತುಪಡಿಸಿ, ಉಳಿದೆಲ್ಲ ಬ್ಯಾಟರ್‌ಗಳು ಉತ್ತಮ ಆಟವಾಡುವಲ್ಲಿ ವಿಫಲವಾದರು.
ಚೆನ್ನೈನ ಸಮರ್‌ಜೀತ್ ಸಿಂಗ್ ನೇತೃತ್ವದ ಬೌಲಿಂಗ್ ಪಡೆಯ ಮುಂದೆ ರಾಜಸ್ಥಾನ್ ರಾಯಲ್ಸ್ ಬ್ಯಾಟರ್‌ಗಳ ಆಟ ನಡೆಯಲಿಲ್ಲ. ನಂತರ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡ 18.2 ಓವರ್‌ಗಳಲ್ಲಿ ಗುರಿಯನ್ನು ಸುಲಭವಾಗಿ ಮುಟ್ಟಿತು. ಈ ವೇಳೆ ಚೆನ್ನೈ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.
ಬ್ಯಾಟಿಂಗ್ ನಲ್ಲಿ ಮಿಂಚಿದ ನಾಯಕ ಋತುರಾಜ್ ಗಾಯಕ್ವಾಡ್ 41 ಎಸೆತಗಳಲ್ಲಿ 42 ರನ್‌ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಆ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ತಾನು ಆಡಿರುವ 13 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಪಾಯಿಂಟ್ ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಆರ್‌ಸಿಬಿ, ಹೈದರಾಬಾದ್ ಸನ್ ರೈಸರ‍್ಸ್, ಡೆಲ್ಲಿ ಕ್ಯಾಪಿಟಲ್, ಲಕ್ನೋ ಸೂಪರ್ ಜೆಂಟ್ಸ್ ನಡುವೆ ಪೈಪೋಟಿ ಇನ್ನೂ ಮುಂದುವರಿದಿದೆ.