ಬೆಂಗಳೂರು: ಖಾಸಗಿ ಶಾಲೆಗಳು ತಾವು ಪಡೆಯುವ ಶುಲ್ಕದ ವಿವರವನ್ನು ಸಾರ್ವಜನಿಕರಿಗೆ ಗೊತ್ತಾಗುವಂತೆ ಪ್ರಕಟ ಮಾಡಲೇಬೇಕು ಎಂದು ಸರಕಾರ ಷರತ್ತು ವಿಧಿಸಿದೆ.
ಖಾಸಗಿ ಶಾಲೆಗಳು ತಮ್ಮ ಶುಲ್ಕದ ವಿವರಗಳನ್ನು ಪ್ರಕಟ ಮಾಡದೆ, ಒಳಗಿಂದೊಳಗೆ ಅನೇಕ ಹಿಡನ್ ಫೀಸ್ ಪಡೆಯುತ್ತಾರೆ ಎಂಬ ಬಗ್ಗೆ ಅನೇಕ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರುಗಳು ಬಂದಿದ್ದವು. ದೂರಿನ ಅನ್ವಯ ಕ್ರಮ ತೆಗೆದುಕೊಂಡಿರುವ ಶಿಕ್ಷಣ ಇಲಾಖೆ ಶುಲ್ಕ ಪಾವತಿ ವಿವರ ಕಡ್ಡಾಯಗೊಳಿಸಿ ಆದೇಶಿಸಿದೆ.
ಶಾಲೆಗಳಲ್ಲಿ ನಿಗದಿಗೊಳಿಸಿರುವ ಶುಲ್ಕದ ವಿವರವನ್ನು ಶಾಲೆಯ ಜಾಲತಾಣದ ಪುಟದಲ್ಲಿ, ಶಾಲಾ ಸೂಚನಾ ಫಲಕದಲ್ಲಿ ಮತ್ತು ಇಲಾಖೆಯ ಜಾಲತಾಣ (ಎಸ್‌ಎಟಿಎಸ್)ನಲ್ಲಿ ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟ ಮಾಡಬೇಕು ಎಂದು ಸೂಚಿಸಲಾಗಿದೆ.
ಯಾವುದೇ ಶಾಲೆಗಳು ಸರಕಾರದ ಈ ನಿಯಮವನ್ನು ಉಲ್ಲಂಘನೆ ಮಾಡಿದರೆ, ಆ ಬಗ್ಗೆ ದೂರುಗಳು ಬಂದರೆ, ಸಂಭAದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರು ಸೆಕ್ಷನ್ 13(2)ಎ ಮತ್ತು ಸೆಕ್ಷನ್ 13(2)ಬಿ ಹಾಗೂ ಕರ್ನಾಟಕ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ನಿಯಮಗಳು-೨೦೧೨ರ ಅನ್ವಯ ಅಂತಹ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.