ಬೆಂಗಳೂರು: ಹಾಲಿ ಸಂಸದನಾಗಿದ್ದುಕೊಂಡು, ದೇಶಬಿಟ್ಟು ಹೋಗಿ ತನಿಖೆಗೆ ಸಹಕರಿಸದೆ, ಪೊಲೀಸರನ್ನೇ ಆಟ ಆಡಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಯುಎಪಿಎ ಅಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ, 100 ಕ್ಕೂ ಹೆಚ್ಚು ಪ್ರಗತಿಪರ ಚಿಂತಕರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಪೆನ್ ಡ್ರೈವ್ ನಲ್ಲಿ ಬಹಿರಂಗಗೊಂಡಂತೆ ಪ್ರಜ್ವಲ್ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಬಹಿರಂಗವಾಗಿದೆ. ಹೀಗಿದ್ದೂ, ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು, ಚುನಾವಣಾ ವ್ಯವಸ್ಥೆಗೆ ಮಾಡಿದ ಅವಮಾನ, ಜತೆಗೆ, ಅವರನ್ನು ದೇಶದಂತೆ ಪರಾರಿಯಾಗುವ ಮೊದಲೇ ಬಂಧಿಸಿ, ವಿಚಾರಣೆಗೆ ಒಳಪಡಿಸುವುದನ್ನು ಬಿಟ್ಟು, ಈಗ ನೊಟೀಸ್ ನೀಡುತ್ತಿರುವುದರಿಂದ ನೊಂದ ಮಹಿಳೆಯರು ಸರಕಾರದ ಮೇಲಿಟ್ಟ ನಂಬಿಕೆಗೆ ಮಾಡಿದ ದ್ರೋಹವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ರಾಜಕೀಯ ನಾಯಕರು ಜಾತಿ ಆಧಾರಿತ, ಲಿಂಗತ್ವ ಸೂಕ್ಷತೆ ಇಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮಾಧ್ಯಮಗಳು ಸಂತ್ರಸ್ತೆಯರೇ ಅಪರಾಧಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದ ಅವರ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಜತೆಗೆ ಅವರಿಗೆ ಸಾಮಾಜಿಕ ಸ್ಥಾನಮಾನ ಇಲ್ಲದಾಗಿದೆ. ಅನೇಕ ಕುಟುಂಬಗಳು ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ. ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಕುಂ.ವೀರಭದ್ರಪ್ಪ, ಕೆ.ಪಣಿರಾಜ್, ಜಿ.ರಾಮಕೃಷ್ಣ, ವಸುಂಧರ ಭೂಪತಿ, ಕೆ.ಶರೀಪಾ, ಮೀನಾಕ್ಷಿ ಬಾಳಿ, ಎಂ.ಆರ್. ಕಮಲಾ, ನಾಗೇಶ್ ಹೆಗಡೆ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ರತಿರಾವ್ ಮತ್ತಿತರು ಸೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.