ಮೇದಕ್?(ತೆಲಂಗಾಣ): ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಸುಮಾರು ಎರಡು ಕೋಟಿ ರು. ಹಣ ಕಳೆದುಕೊಂಡ ಮಗನನ್ನು ಸ್ವಂತ ತಂದೆಯೇ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.
ಚಿನ್ನಶಂಕರಪೇಟೆ ತಾಲೂಕಿನ ಭಗೀರಥಪಲ್ಲಿ ಮೂಲದ ಮುಖೇಶ್ ಕುಮಾರ್ ರೈಲ್ವೆ ಉದ್ಯೋಗಿಯಾಗಿದ್ದರು. ಮೋಜಿಗಾಗಿ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದಲ್ಲದೆ, ಸುಮಾರು 2 ಕೋಟಿ ಹಣ ಕಳೆದು ಕೊಂಡಿದ್ದಾರೆ. ಇದನ್ನು ಕಂಡ ತಂದೆ ಸತ್ಯನಾರಾಯಣ, ಆನ್‌ಲೈನ್ ಗೇಮ್ ಆಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು.
ತಂದೆ ಎಷ್ಟು ಬಾರಿ ಹೇಳಿದರು ಮಗ ಕೇಳಿರಲಿಲ್ಲ. ಬೇಸತ್ತ ಸತ್ಯನಾರಾಯಣ ಶನಿವಾರ ಮಧ್ಯರಾತ್ರಿ ಕಬ್ಬಿಣದ ರಾಡ್‌ನಿಂದ ಮಗನ ತಲೆಗೆ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಮುಖೇಶ್ ಕುಮಾರ್ ಸಾವನ್ನಪ್ಪಿದ್ದಾರೆ. ಮುಕೇಶ್ ಕುಮಾರ್ ಚೇಗುಂಟಾ ತಾಲೂಕಿನ ಮಲ್ಯಾಲದಲ್ಲಿ ರೈಲ್ವೆ ಉದ್ಯೋಗಿಯಾಗಿದ್ದರು ಎನ್ನಲಾಗಿದೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತಂದೆ-ಮಗನ ನಡುವಿನ ಜಗಳಕ್ಕೆ ಆನ್‌ಲೈನ್ ಬೆಟ್ಟಿಂಗ್ ಕಾರಣವಾಗಿದ್ದು, ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ, ಬೆಟ್ಟಿಂಗ್ ನಿಂದಾಗಿ ಮುಖೇಶ್ ಕುಮಾರ್ ಹೆಸರಿನಲ್ಲಿರುವ ಮನೆಗಳು ಮತ್ತು ನಿವೇಶನ ಮಾರಾಟ ಮಾಡಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.