ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಸದಸ್ಯರ ಪುತ್ರಿಯನ್ನೇ ಕಾಲೇಜಿನಲ್ಲಿ, ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಇರಿದು ಕೊಂದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ಇಂದು ಸಂಜೆ ಘಟನೆ ನಡೆದಿದ್ದು, ವಿದ್ಯಾರ್ಥಿನಿ ನೇಹಾ ಹಿರೇಮಠ (24) ಕೊಲೆಗೀಡಾದ ಯುವತಿ. ಮೃತ ನೇಹಾ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರ ಮಗಳು. ನಗರದ ಬಿವಿಬಿ ಕಾಲೇಜಿನಲ್ಲಿ ಎಂಸಿಎ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ, ಆಕೆ ಇಂದು ಪರೀಕ್ಷೆ ಇದ್ದ ಕಾರಣ ಕಾಲೇಜಿಗೆ ತೆರಳಿದ್ದ ವೇಳೆ ಯುವಕ ಏಕಾಏಕಿ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ದಾಳಿಯಿಂದ ನೇಹಾ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೂಡಲೇ ಸ್ಥಳೀಯ ಸಹಪಾಠಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆದರೆ, ಚಿಕಿತ್ಸೆ ಫಲಿಸದೇ ನೇಹಾ ಮೃತಪಟ್ಟಿದ್ದಾಳೆ. ಘಟನೆಯಿಂದ ಕಿಮ್ಸ್ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಷಯ ತಿಳಿದು ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದಾರೆ. ಪ್ರಕರಣ ಸಂಬಂಧ ಅದೇ ಕಾಲೇಜಿನ ವಿದ್ಯಾರ್ಥಿ ಫಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಫಯಾಜ್ ಸವದತ್ತಿ ಮೂಲದವನೆಂದು ತಿಳಿದು ಬಂದಿದ್ದು, ಅದೇ ಕಾಲೇಜಿನ ವಿದ್ಯಾರ್ಥಿ ಎನ್ನಲಾಗಿದೆ.
ಹಲವು ಬಾರಿ ಚಾಕು ಇರಿತ
ವಿದ್ಯಾರ್ಥಿನಿ ನೇಹಾ ಕ್ಯಾಂಪಸ್ನಲ್ಲಿದ್ದ ವೇಳೆ ಫಯಾಜ್ ಆಕೆ ಮೇಲೆ ದಿಢೀರ್ ಚಾಕುವಿನಿಂದ ದಾಳಿ ಮಾಡಿ ಹಲವು ಬಾರಿ ಇರಿದಿದ್ದಾನೆ. ಯುವಕ ಈ ಕೃತ್ಯ ಎಸಗಿದ್ದು ಯಾಕೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಚಾಕು ಇರಿತದಿಂದ ನೇಹಾ ಸ್ಥಳದಲ್ಲೇ ಕುಸಿದುಬಿದ್ದು, ಕ್ಯಾಂಪಸ್ನಲ್ಲಿದ್ದವರು ವಿದ್ಯಾರ್ಥಿನಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಸಾವನ್ನಪ್ಪಿದ್ದಾಳೆ. ಯುವಕನ ಈ ಕೃತ್ಯ ಕಾಲೇಜಿನ ಕ್ಯಾಂಪಸ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.