ಬೆಂಗಳೂರು: ನಾಲ್ಕು ವರ್ಷದಿಂದ ನಡೆಯದಿರುವ ಬಿಬಿಎಂಪಿ ಚುನಾವಣೆಯನ್ನು ನಡೆಸುವ ಮೂಲಕ ಸ್ಥಳೀಯವಾಗಿ ಕಾರ್ಯಕರ್ತರಿಗೆ ಅಧಿಕಾರ ನೀಡಲು ಕಾಂಗ್ರೆಸ್ ನಿರ್ಧರಿಸಿದ್ದು, ಇದಕ್ಕಾಗಿ ತಯಾರಿ ನಡೆಸಲಾಗುತ್ತಿದೆ.
ಬೆಂಗಳೂರು ಉಸ್ತುವಾರಿ ಸಚಿವರೂ ಆದ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಮಂಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಿ ಎಂದು ಕರೆ ನೀಡಿದ್ದರು. ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ ಎಂದು ಹೇಳಿದ್ದರು. ಇದೀಗ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲ ರಾಜಕೀಯ ಕಸರತ್ತುಗಳನ್ನು ಕಾಂಗ್ರೆಸ್ ಆರಂಭಿಸಿದೆ.
ಮಂಗಳವಾರವೇ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಸ್ಥಳೀಯ ಶಾಸಕರು, ಬಿಬಿಎಂಪಿ ಆಕಾಂಕ್ಷಿಗಳನ್ನು ಜತೆಯಲಿ ಕರೆದೊಯ್ದಿದ್ದರು. ಸ್ಥಳೀಯ ಮಟ್ಟದಲ್ಲಿ ಅಧಿಕಾರ ಕೊಡುತ್ತೇವೆ ಎಂದುಕೊAಡು ಈಗಾಗಲೇ, ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಕಾರ್ಯಕರ್ತರನ್ನು ದುಡಿಸಿಕೊಂಡಿದ್ದೇವೆ. ಈಗ ಲೋಕಸಭೆ ಚುನಾವಣೆ ಮುಗಿದಿದ್ದು, ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿಯೇ ಸಿದ್ಧ ಎಂದು ತಿಳಿಸಿದ್ದಾರೆ.
ಮರುದಿನವೇ ಸಿಎಂ ಸಿದ್ದರಾಮಯ್ಯ ಅವರು ಕೂಡ ಬುಧವಾರ ಸಿಟಿ ರೌಂಡ್ಸ್ ನಡೆಸಿದ್ದಾರೆ. ಬೆಂಗಳೂರಿನ ಮಳೆಹಾನಿ ಪ್ರದೇಶಗಳೀಗೆ ಭೇಟಿ ನೀಡಿ, ಅಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ, ನಗರಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆದು, ಅಗತ್ಯ ಕ್ರಮಕ್ಕೆ ಉಸ್ತುವಾರಿ ಸಚಿವರು, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಿದ್ದರಾಮಯ್ಯ 2013 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ಚುನಾವಣೆ ನಡೆದಿತ್ತು. 2015 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿಲ್ಲದಿದ್ದರೂ, ತಂತ್ರಗಾರಿಕೆ ಮೂಲಕ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತ್ತು. 2020 ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಚುನಾವಣೆ ನಡೆಸದೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಪ್ರಕರಣ ಕೊಂಡೊಯ್ದು, ಬಿಬಿಎಂಪಿಗೆ ಹೊಸ ಕಾಯಿದೆ ಜಾರಿಗೆ ತಂದಿತ್ತು.
224 ವಾರ್ಡ್ಗಳನ್ನು ರಚಿಸಿ, ಅಷ್ಟು ವಾರ್ಡ್ಗೆ ಚುನಾವಣೆ ನಡೆಸುತ್ತೇವೆ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡೇ ಬಂದ ಸರಕಾರ ಕೊನೆಗೂ ಚುನಾವಣೆ ನಡೆಸಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದ್ದು, ಈಗಲಾದರೂ ಚುನಾವಣೆ ನಡೆಯಲಿದೆ ಎಂದು ಆಸೆ ಇಟ್ಟುಕೊಂಡಿದದ ಆಕಾಂಕ್ಷಿಗಳಿಗೆ ಲೋಕಸಭೆ ಚುನಾವಣೆ ನಿರಾಸೆಯನ್ನುಂಟು ಮಾಡಿತ್ತು. ಇದೀಗ ಲೋಕಸಭೆ ಚುನಾವಣೆಯೂ ನಡೆದಿದ್ದು, ಬಿಬಿಎಂಪಿ ಚುನಾವಣೆ ನಡೆಸಲು ಸರಕಾರ ಆಸಕ್ತಿ ವಹಿಸಿದೆ.
ಒತ್ತುವರಿ ತೆರವಿಗೆ ಮುಂದಾದ ಸರಕಾರ !
ನಗರದ ಬಹುತೇಮ ಮಳೆ ಹಾನಿ ಸಮಸ್ಯೆಗೆ ರಾಜಕಾಲುವೆ ಒತ್ತುವರಿಯೇ ಪ್ರಮುಖ ಕಾರಣ, ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ 491 ಕಿ.ಮೀ ರಾಜಕಾಲುವೆ ವ್ಯಾಪ್ತಿಯ ಒತ್ತುವರಿ ತೆರವು ಮಾಡಲಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ 165 ಕಿ.ಮೀ ಒತ್ತುವರಿ ತೆರವು ಮಾಡಲಾಗಿದೆ. ಉಳಿದ ಒತ್ತುವರಿ ತೆರವಿಗೆ ಇದೀಗ ಮತ್ತೇ ಚಾಲನೆ ನೀಡುವ ಮೂಲಕ ನಗರದಲ್ಲಿ ಗ್ಯಾರಂಟಿ ಜತೆಗೆ, ನಗರದ ಅಭಿವೃದ್ಧಿಯನ್ನು ಜನರ ಮುಂದಿಟ್ಟು ಮತ ಕೇಳಲು ಸರಕಾರ ಮುಂದಾಗಿದೆ. ಜತೆಗೆ, ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣ, ಮಡಿವಾಳ ಕರೆಯಿಂದ ನೀರು ಸಂಗ್ರಹವಾಗುವ ಸಮಸ್ಯೆಗೆ ಪರಿಹಾರ, ಸಿಗ್ನಲ್ ಫ್ರೀ ಕಾರಿಡಾರ್‌ಗಳು, ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಜನಸ್ನೇಹಿ ಕೆಲಸಗಳ ಮೂಲಕ ಚುನಾವಣೆಗೆ ಹೋಗಲು ಕಾಂಗ್ರೆಸ್ ತೀರ್ಮಾನಿಸಿದೆ.